Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

"ದನಕಾಯೋರ ದೊಡ್ಡಾಟ- ನಗುವಿನ ಜಲಪಾತ"

 

ನಾಟಕ ನೋಡುವ ಮುನ್ನ...
“ಸಾವಿರ ಪ್ರಯೋಗ ಕಂಡರೂ ಸಾವಿರದ ನಾಟಕ" ಎಂಬ ಪ್ರಶಂಸೆಗೆ ಪಾತ್ರವಾದ ದನಕಾಯೋರ ದೊಡ್ಡಾಟ ಕನ್ನಡ ರಂಗಭೂಮಿಯ ವಿಭಿನ್ನ ವಿಶಿಷ್ಟ ಹಾಸ್ಯ ನಾಟಕವಾಗಿದೆ. ಇಂದಿನ ಧಾವಂತ ಜೀವನದಲ್ಲಿ ಮಾನವನ ಮನಸ್ಸು ಒತ್ತಡ, ಆತಂಕ, ಸ್ಪರ್ಧೆ ಮತ್ತು ಗೊಂದಲಗಳಿಂದ ತುಂಬಿದೆ. ಇಂತಹ ಸಂದರ್ಭದಲ್ಲಿ ನಗು ಎಂಬುದು ದಿವ್ಯ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.“ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ” ಎಂದು ಕವಿ ಡಿ.ವಿ.ಜಿ. ಅವರು ಹೇಳಿದಂತೆ, ನಗುವಿನ ಮಹತ್ವವನ್ನು ಈ ನಾಟಕ ಸ್ಪಷ್ಟವಾಗಿ ಮನವರಿಕೆ ಮಾಡುತ್ತದೆ.

ನಗು ಬೇಕು ನಗುತಾ ಬಾಳಲು
ನಗು ಮಾನವನಿಗೆ ಸಹಜ. ಆದರೆ ಇಂದಿನ ಬದುಕಿನಲ್ಲಿ ನಗುವುದೇ ಅಪರೂಪವಾಗಿದೆ. ಮುಖದಲ್ಲಿ ಗಂಭೀರತೆ, ಮನಸ್ಸಿನಲ್ಲಿ ಗದ್ದಲ ಗೌಜು ಗಡಿಬಿಡಿ ಇವುಗಳು ನಮ್ಮ ದಿನನಿತ್ಯದ ಸಂಗಾತಿಗಳಾಗಿವೆ. ಇಂತಹ ಸಂದರ್ಭದಲ್ಲಿ “ದನಕಾಯೋರ ದೊಡ್ಡಾಟ” ಪ್ರೇಕ್ಷಕರಿಗೆ ನಗುವಿನ ಮಹೋತ್ಸವವನ್ನೇ ನೀಡುತ್ತದೆ. ಒಬ್ಬರೇ ಹೋಗಿ ನೋಡುವುದಕ್ಕಿಂತ ಸ್ನೇಹಿತರೊಂದಿಗೆ ನೋಡಿದರೆ ಅದರ ಮಜಾ ಮತ್ತಷ್ಟು ಹೆಚ್ಚಾಗುತ್ತದೆ. ಮದ್ಯಪಾನಿಗಳು ಗುಂಪಾಗಿ ಹೋಗುವಂತೆ, ಇದು “ನಗೆಪಾನ”ಕ್ಕೆ ಗುಂಪಾಗಿ ಹೋಗುವ ನಾಟಕ! ಕಲಾವಿದರ ಅಭಿನಯದ ಕಿಕ್ ಪ್ರೇಕ್ಷಕರನ್ನು ಬಾಯಿ ತೆರೆಯುವಂತೆ ನಗಿಸುತ್ತದೆ.

ಕಣ್ಣಿಗೆ ಕಾಣದ ನಾಟಕಕಾರ
ಈ ನಾಟಕವನ್ನು ದಿವಂಗತ ಶಂಕರ ನಾಯ್ಡು ರಚಿಸಿದ್ದಾರೆ. ಸಾಕ್ಷರತಾ ಚಳುವಳಿಯ ಅಂಗವಾಗಿ ಅಂದು ಹುಟ್ಟಿದ ಈ ನಾಟಕ, ಇಂದಿಗೆ ನಗುವಿನ ವಿಜಯದ ಸಂಕೇತವಾಗಿದೆ. ನಾಟಕ ಪ್ರದರ್ಶನಗೊಳ್ಳುವ ಪ್ರತಿಸಾರಿ ಶಂಕರ ನಾಯ್ಡು ಅವರ ಸಾನ್ನಿಧ್ಯವೇ ರಂಗಮಂದಿರದಲ್ಲಿ ಮೂಡಿದಂತೆ ಭಾಸವಾಗುತ್ತದೆ. ಅವರು ಬರೆದ ಅಕ್ಷರಗಳು ಇಂದು ನಗುವಿನ ಅಲೆಗಳಾಗಿ ಹರಿದು ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತವೆ.ಈಗ್ಗೆ ೩೦ ವರ್ಚಗಳ ಹಿಂದೆ ಬರೆದ ಈ ನಾಟಕ ಇಂದಿಗೂ ನಿತ್ಯ ನೂತನವಾಗಿದೆ ಹೊಸ ಹೊಸ ಸಾಧ್ಯತೆಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತಾ ನಿತ್ಯ ಸಂಜೀವನಿ ಈ ನಾಟಕ ಬರದು ಈ ಲೋಕದಿಂದ ಮರೆಯಾದ ಕಣ್ಣಿಗೆ ಕಾಣದ ನಾಟಕಕಾರ ಶಂಕರ ನಾಯ್ಡು ನಿಮಗಿದೋ ನಮ್ಮ ನಮಸ್ಕಾರ.

ನಿರ್ದೇಶಕ ಹಾಗೂ ಕಲಾಬಳಗ
ಈ ನಾಟಕಕ್ಕೆ ಜೀವ ತುಂಬಿದವರು ಪುರುಷೋತ್ತಮ ಹಂದ್ಯಾಳ. ಅವರ ಸಮರ್ಥ ಮಾರ್ಗದರ್ಶನದಲ್ಲಿ ಪ್ರತಿಯೊಂದು ಪ್ರಯೋಗಕ್ಕೂ ಹೊಸ ಚೈತನ್ಯ ದೊರೆಯುತ್ತಿದೆ. ಝರಿಯೊಂದು ಮೂಲದಲ್ಲಿ ಹುಟ್ಟಿ ಮುಂದೆ ನದಿಯಾಗಿ, ಬಳಿಕ ಜಲಪಾತವಾಗುವಂತೆ ಈ ನಾಟಕವೂ ಕಾಲಕ್ರಮೇಣ ಬಹುಮುಖಿಯಾಗಿ ಬೆಳೆಯುತ್ತಿದೆ. ಆರಂಭದಲ್ಲಿ ಸಾಕ್ಷರತೆಯ ಸಂದೇಶವನ್ನೇ ಮುಖ್ಯವಾಗಿ ಹೊತ್ತಿದ್ದ ಈ ನಾಟಕ, ಇಂದಿಗೆ ಹಾಸ್ಯ, ವ್ಯಂಗ್ಯ, ಸಾಮಾಜಿಕ ಸಂದೇಶಗಳ ಸಮನ್ವಯವಾಗಿ ರೂಪುಗೊಂಡಿದೆ.
ನಾಟಕದ ಕಲಾವಿದರ ಅಭಿನಯವೇ ಇದರ ಜೀವಾಳ. ದುಶ್ಯಾಸನನಾಗಿ ಅಭಿನಯಿಸುವ ಪಾರ್ವತೀಶ್ ಪಾತ್ರಕ್ಕೆ ತಕ್ಕ ನವಿರಾದ ಅಭಿನಯದೊಂದಿಗೆ ರಾಜ ಹಾಸ್ಯವನ್ನು ಬೆರೆಸುತ್ತಾರೆ. ಜೂನಿಯರ್ ನರಸಿಂಹರಾಜು ಎಂದು ಕರೆಯಲ್ಪಡುವ ನಗುವೀಶ್ ಅವರ ಮುಖಭಾವನೆಗಳು ಪ್ರೇಕ್ಷಕರನ್ನು ನಗುವಿನ ಮಳೆಯಲ್ಲೇ ತೋಯಿಸುತ್ತವೆ. ಗಣೇಶನಾಗಿ ಚಂದ್ರಶೇಖರ ಆಚಾರ್, ದುರ್ಯೋಧನನಾಗಿ ಅಂಬರೀಶ್, ಭೀಮನಾಗಿ ದಾನಯ್ಯಸ್ವಾಮಿ, ನಕುಲನಾಗಿ ಅನುಮಯ್ಯ ಹಾಗೂ ಸಹದೇವನಾಗಿ ಲಿಂಗಪ್ಪ, ಕೃಷ್ಣನಾಗಿ ಸುಬ್ಬಣ್ಣ,ಅಗಸನ ಪಾತ್ರದಲ್ಲಿ ಸುಂಕಪ್ಪ ಇವರ ಡೈಲಾಗ್ ಡೆಲಿವರಿ ಮತ್ತು ಸಮಯ ಪ್ರಜ್ಞೆ ನಗುವಿನ ಅಲೆಗಳನ್ನು ಹುಟ್ಟಿಸುತ್ತವೆ.

ಮಿಂಚು ಕಂಗಳ ಚೆಲುವೆ ಮೌನೇಶ್
ವಿಶೇಷವಾಗಿ ಮೌನೇಶ್ ಅವರ ಅಭಿನಯ ನಾಟಕದ ಪ್ರಮುಖ ಆಕರ್ಷಣೆ. ಪೌರಾಣಿಕ ಪಾತ್ರಗಳಲ್ಲಿ ವೈವಿದ್ಯ ನಾಟ್ಯಭಂಗಿಗಳ ಮೂಲಕ ಜನಮನ ಗೆದ್ದಿರುವ ಇವರು ಈ ನಾಟಕದಲ್ಲಿ ತುಂಟ ದ್ರೌಪದಿಯಾಗಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾರೆ. ಅವರ ನವಿಲಿನಂತ ನಾಟ್ಯ, ಒಯ್ಯಾರ, ಭಾವಭಂಗಿ ಅರಿಸಿಕರಲ್ಲಿ ಶೃಂಗಾರ ರಸವನ್ನು ಸ್ಪುರಿಸುತ್ತದೆ. ಸ್ತ್ರೀಪಾತ್ರವನ್ನು ಅಷ್ಟು ಸಹಜವಾಗಿ, ನಾಜೂಕಾಗಿ ನಿರ್ವಹಿಸುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಯಾಗಿದೆ.

ನಗುವಿನ ಮೂಲ ಎಲ್ಲಿ,?
“ನಗು ನಾಟಕದೊಳಿದೆಯೋ? ನಾಟಕ ನಗುವಿನೊಳಿದೆಯೋ? ಅಥವಾ ನಗು ನಾಟಕ ಪ್ರೇಕ್ಷಕನ ಹೃದಯದಲ್ಲಿವೆಯೋ ?ಎಂಬ ಪ್ರಶ್ನೆ ಈ ನಾಟಕವನ್ನು ನೋಡಿದಾಗ ಹುಟ್ಟುತ್ತದೆ. ನಗುವಿರೋದೆ ಪ್ರೇಕ್ಷಕನ ಮನದಾಳದಲ್ಲಿ ಅಂತೆಯೇ ಪ್ರೇಕ್ಷಕರು ನಕ್ಕು ಹಗುರಾಗುತ್ತಾರೆ; ಕಲಾವಿದರು ಶ್ರಮಪಟ್ಟು ಭಾರವಾಗುತ್ತಾರೆ. ಮಳೆ ಸುರಿದು ಮೋಡ ಹಗುರಾದರೆ ಭೂಮಿ ನೀರಿನಿಂದ ತುಂಬುವಂತೆ, ಕಲಾವಿದರ ಪರಿಶ್ರಮದಿಂದ ಪ್ರೇಕ್ಷಕರ ಮನಸ್ಸು ಸಂತೋಷದಿಂದ ತುಂಬುತ್ತದೆ. ನಗುವಿನ ಅಲೆಗಳು ರಂಗಮಂದಿರವನ್ನೇ ಆವರಿಸುತ್ತವೆ.

ನಾಟಕದ ಸಂದೇಶವೇನು?
ಈ ನಾಟಕ ಕೇವಲ ನಗುವಿನ ಪಾಕವಲ್ಲ. ಇದರಲ್ಲಿ ಗಂಭೀರ ಸಂದೇಶವೂ ಅಡಗಿದೆ. ಕುಡಿದು ರಂಗಮಂಚಕ್ಕೆ ಬರುವ ಕಲಾವಿದರಿಗೆ ಇದು ಚಾಟಿಯ ಏಟನ್ನು ಬೀಸುತ್ತದೆ.ನಾಟಕವನ್ನು ವೈಯಕ್ತಿಕ ಪ್ರಚಾರದ ವೇದಿಕೆಯಾಗಿಸಬಾರದು; ಕಲಾದೇವಿಯ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಇದು ಸಾರುತ್ತದೆ. ವಿನಯ, ಶ್ರದ್ಧೆ, ಪರಿಶ್ರಮ, ಬದ್ಧತೆ ಇವುಗಳೇ ಒಬ್ಬ ಕಲಾವಿದನ ನಿಜವಾದ ಆಭರಣಗಳು ಎಂಬ ಸತ್ಯವನ್ನು ಸ್ಪಷ್ಟಪಡಿಸುತ್ತದೆ.ಇದಲ್ಲದೆ, ಶಿಕ್ಷಣದ ಮಹತ್ವವನ್ನು ಈ ನಾಟಕ ಸೂಕ್ಷ್ಮವಾಗಿ ತಿಳಿಸುತ್ತದೆ. ಸಾಕ್ಷರತೆಯೇ ಶಕ್ತಿ, ಜ್ಞಾನವೇ ಪ್ರಗತಿಯ ದಾರಿ ಎಂಬ ಸಂದೇಶವನ್ನು ಹಾಸ್ಯದ ಆವರಣದಲ್ಲಿ ನೀಡುತ್ತದೆ. ಹಾಸ್ಯವೇ ಅದರ ಶಕ್ತಿ; ಸಂದೇಶವೇ ಅದರ ಗುರಿ.
ಒಟ್ಟಿನಲ್ಲಿ “ದನಕಾಯೋರ ದೊಡ್ಡಾಟ” ಕನ್ನಡ ರಂಗಭೂಮಿಯ ಹೆಮ್ಮೆ. ಇದು ಪ್ರೇಕ್ಷಕರನ್ನು ನಗಿಸುವುದಷ್ಟೇ ಅಲ್ಲ, ಯೋಚಿಸುವಂತೆ ಮಾಡುತ್ತದೆ. ಮನದ ಭಾರವನ್ನು ಕಡಿಮೆ ಮಾಡಿ, ಜೀವನವನ್ನು ಹಗುರವಾಗಿ ನೋಡಲು ಕಲಿಸುತ್ತದೆ. ನಗು ಎಂಬ ಅಮೂಲ್ಯ ಸಂಪತ್ತನ್ನು ಮರಳಿ ನೀಡುವ ಈ ನಾಟಕ ಇನ್ನೂ ಲಕ್ಷಾಂತರ ಪ್ರಯೋಗಗಳನ್ನು ಕಾಣಲಿ.ಶಂಕರ ನಾಯ್ಡು ಅವರ ಸೃಜನಶೀಲತೆ ಚಿರಂಜೀವಿಯಾಗಲಿ; ಈ ನಗುವಿನ ಜಲಪಾತ ಕನ್ನಡ ರಂಗಭೂಮಿಯಲ್ಲಿ ಸದಾ ಹರಿಯುತಿರಲಿ ಎಂಬ ಹಾರೈಕೆಯೊಂದಿಗೆ.

ಇಂತಿ ನಿಮ್ಮ ಪ್ರೇಕ್ಷಕ
ಎ.ಎಂ.ಪಿ ವೀರೇಶಸ್ವಾಮಿ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ