Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಪರಿಸರ ದಿನಾಚರಣೆ ಮುಗಿಯಿತು.... ಮುಂದೇನು?

 

ಪರಿಸರ ಉಳಿಸಿ ಎಂಬ ಕೂಗು ಕೇವಲ ಭಿತ್ತಿ ಪತ್ರಗಳಲ್ಲಿ ಮಾತ್ರವಲ್ಲ.... ಕಳೆದ ಎರಡು ದಶಕಗಳಿಂದ ಈ ಕೂಗು ಆರಂಭವಾಗಿದೆ. ನಮ್ಮ ಭೂಮಿಯನ್ನು ಸೂರ್ಯನ ವಿಕಿರಣಗಳಿಂದ ತಡೆಗಟ್ಟುವ ಓಜೋನ್ ಪದರವು
ಛಿದ್ರವಾಗಿದ್ದು ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳಿಗೆ ಜನರು ಈಡಾಗುತ್ತಾರೆ ಎಂಬ ಭಯ ಭೂಮಿಯ ವಾಸಿಗಳಿಗೆ ಇತ್ತು.

ಕೇವಲ ಒಂದು ಶತಮಾನದ ಹಿಂದೆ ನಮ್ಮ ಎಲ್ಲಾ ಹಳ್ಳಿಗಳ ಕೆರೆ ಕಟ್ಟೆಗಳು ಸ್ವಚ್ಛವಾಗಿದ್ದವು. ದನ ಕರುಗಳನ್ನು ತೊಳೆಯುವ,ಬಟ್ಟೆಗಳನ್ನು ಸೆಳೆಯುವ ರೈತಾಪಿ ಕೆಲಸ ಕಾರ್ಯಗಳಿಗೆ ನೆರವಾಗುವ ಕೆರೆಕಟ್ಟೆಗಳು ಇಂದು ಇಲ್ಲವೇ ಇಲ್ಲ ಎಂಬ ಮಟ್ಟಿಗೆ ನಮ್ಮ ಬದುಕು ನಿಂತಿದೆ.

ಪರಿಸರ ದಿನಾಚರಣೆಯನ್ನು ಜೂನ್ 5ರಂದು ಪ್ರತಿ ವರ್ಷ ನಾವು ಆಚರಿಸುತ್ತೇವೆ. ಪ್ರತಿಯೊಂದು ಜಿಲ್ಲೆ, ತಾಲೂಕು ಗಳ ಮುಖ್ಯ ಕಚೇರಿಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಸಂಘ ಸಂಸ್ಥೆಗಳ ಕಟ್ಟಡಗಳಲ್ಲಿ ಪರಿಸರ ದಿನಾಚರಣೆಯ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಕಟ್ಟಿ ನಿಗದಿತ ಜಾಗದಲ್ಲಿ ಗಿಡವನ್ನು ನೆಟ್ಟು ಚಂದದ ಫೋಟೋಕ್ಕೆ ಪೋಸ್ ಕೊಟ್ಟು ಪತ್ರಿಕೆಗಳಿಗೆ ಈ ವಿಷಯವನ್ನು ಕಳುಹಿಸಿ ಮರುದಿನದ ಪತ್ರಿಕೆಯಲ್ಲಿ ಆ ವಿಷಯ ಪ್ರಕಟವಾದರೆ ಆ ವರ್ಷದ ಪರಿಸರ ದಿನಾಚರಣೆ ಸಾರ್ಥಕ ಎಂಬ ಭಾವ ನಮ್ಮ ಜನರಲ್ಲಿ!

ಪ್ರತಿದಿನ, ಪ್ರತಿ ಕ್ಷಣ, ಒಂದೊಂದು ಮಗು ಹುಟ್ಟುವ ನಮ್ಮ ದೇಶದಲ್ಲಿ ಇನ್ನೂ 500 ಕೋಟಿ ಗಿಡಗಳು ಬೇಕು ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಪರಿಸರ ದಿನಾಚರಣೆಯ ಮಹತ್ವವನ್ನು ನಾವು ವಿಶ್ಲೇಷಿಸಿ ನೋಡೋಣ.

ಇದೇ ರೀತಿ ಆಧುನೀಕರಣದ ಭರಾಟೆ ಮುಂದುವರೆದರೆ ರಸ್ತೆಗಳನ್ನೆಲ್ಲ ಕಾಂಕ್ರೀಟ್ ಮಯವನ್ನಾಗಿಸಿ ಮಳೆಯ ನೀರು ಇಂಗದಂತೆ ನೆಲಕ್ಕೆಲ್ಲ ಕಾಂಕ್ರೀಟ್ ಹಾಸನ್ನು ಹಾಸಿ ಮಳೆ ಬಂದಾಗ ನೀರು ಇಲ್ಲದಂತೆ ಮಾಡಿದ್ದು ಯಾರು? ನಮ್ಮ ಅವೈಜ್ಞಾನಿಕ ಮಾದರಿಯ ರಸ್ತೆ ಕಾಮಗಾರಿಗಳು ಮತ್ತು ಅದಕ್ಕೆ ಪರವಾನಿಗೆ ಕೊಟ್ಟ ಅಧಿಕಾರಿಗಳು ಅಲ್ಲವೇ?
ಹಾಗಾದ್ರೆ ಮೋಡದಿಂದ ಸುರಿದ ಮಳೆ ಹೋಗಿ ಸೇರಿದ್ದು ಎಲ್ಲಿಗೆ? ಎಂದು ಕೇಳಿದಾಗ ತಗ್ಗು ಪ್ರದೇಶದ ಮನೆಗಳಿಗೆ, ಚರಂಡಿಗಳಿಗೆ ಎಂಬ ಉತ್ತರ ದೊರೆಯಬಹುದು.

ಬಹುತೇಕ ತಗ್ಗು ಪ್ರದೇಶದಲ್ಲಿರುವ ಮನೆಗಳು ಇರುವ ಜಾಗದಲ್ಲಿ ಈ ಮೊದಲು ಕೆರೆಕಟ್ಟೆಗಳು ಇದ್ದು ಬದಲಾದ ಪರಿಸ್ಥಿತಿಯಲ್ಲಿ ಜನವಸತಿಗೆ ಅನುಕೂಲವಾಗುವಂತೆ ಈ ಕೆರೆಗಳನ್ನು ಮುಚ್ಚಿಹಾಕಿ ಅವುಗಳ ಜಾಗದಲ್ಲಿ ವಸತಿ ನಿರ್ಮಿಸಿಕೊಳ್ಳಲು ನಿವೇಶನಗಳನ್ನು ಮಾಡಿಕೊಟ್ಟವರು ಯಾರು? ಹಾಗೆ ಅ ನಿವೇಶನಗಳನ್ನು ಮಾಡಲು ಪರವಾನಿಗೆ ಕೊಟ್ಟವರು ಯಾರು? ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು.

ರಸ್ತೆ ಅಗಲೀಕರಣಕ್ಕೆ ತೊಂದರೆ ಉಂಟು ಮಾಡುವ ದೊಡ್ಡ ದೊಡ್ಡ ಮರಗಳಿಗೆ ಕೊಡಲಿ ಹಾಕಿ, ವರ್ಷಕ್ಕೊಮ್ಮೆ ಅಲ್ಲಲ್ಲಿ ಪುಟ್ಟ ಸಸಿಯನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಕೈಗೊಳ್ಳುವ ವಂದಿಮಾಗಧರೆ ಇರಲಿ, ಜನಸಾಮಾನ್ಯರೇ ಇರಲಿ ಅವರೆಲ್ಲರಿಗೂ ಗೊತ್ತಿರುವ ಸತ್ಯ ಸಂಗತಿ ಅದೆಷ್ಟೇ ನೀರು ಗೊಬ್ಬರ ಹಾಕಿದರೂ ಪುಟ್ಟ ಸಸಿ ಗಿಡವಾಗಿ ನಂತರ ಹೆಮ್ಮರವಾಗಿ ಬೆಳೆಯಲು ವರ್ಷಗಳೇ ಬೇಕು.
ನೆಡದ, ಪಾಲಿಸದ ನಮಗೆ ಕತ್ತರಿಸಲು ಅವಕಾಶ ಮಾಡಿಕೊಟ್ಟವರು ಯಾರು?

ಖನಿಜಗಳನ್ನು ಹೊರತೆಗೆಯುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಪರ್ವತಗಳನ್ನು ಅಗಿದು ನೆಲಸಮ ಮಾಡಿರುವ
ಬೆಟ್ಟವನ್ನು ಅಗೆದು ಇಲಿಯನ್ನು ಹಿಡಿದಂತೆ ಕಾರ್ಯಗಳು ನಡೆದಿವೆ. ಆದರೆ ಈ ರೀತಿಯ ಕಾಮಗಾರಿಗಳಿಂದ ವ್ಯವಸಾಯ ಯೋಗ್ಯ ಕೃಷಿ ಭೂಮಿಗಳು ನಾಶವಾಗಿದ್ದು ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳು ಕಾಣೆಯಾಗಿವೆ. ಸ್ನೇಹಿತರೆ ಇಡೀ ಭಾರತ ದೇಶದ 140 ಕೋಟಿ ಜನ ಮೊಣಕಾಲೂರಿ ಬಗ್ಗಿ ಆ ದೇವರನ್ನು ಪ್ರಾರ್ಥಿಸಿದರೂ ಒಂದು ಬೆಟ್ಟವನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ ಒಂದು ನದಿಯನ್ನು ಹರಿಸಲು ಸಾಧ್ಯವಿಲ್ಲ.
ಬ್ರಹ್ಮಾಂಡವು ನಮಗೆ ನೀಡಿರುವ ಅತಿ ದೊಡ್ಡ ಉಡುಗೊರೆ ನಾವಿರುವ ಪರಿಸರ ಚಿಕ್ಕ ಪುಟ್ಟ ಹುಡುಗರೇಗಳನ್ನು ಅತ್ಯಂತ ಜತನವಾಗಿ ಕಾಯ್ದುಕೊಳ್ಳುವ ನಾವುಗಳು ನಮ್ಮ ಈ ಪರಿಸರವನ್ನು ಹಾಳಾಗಲು ಬಿಟ್ಟದ್ದಾದರೂ ಹೇಗೆ ?
ಪರಿಸರ ಮತ್ತು ಮನುಷ್ಯನಿಗೆ ಇರುವ ಅವಿನಾಭಾವ ಸಂಬಂಧದ ಕಾರಣ ಒಬ್ಬರಿಗೊಬ್ಬರು ಪೂರಕವಾಗಿ ಬದುಕಿದರೆ ಮಾತ್ರ ಇಬ್ಬರೂ ಉಳಿಯುತ್ತಾರೆ ಇಲ್ಲವಾದರೆ ಇಬ್ಬರೂ ನಾಶವಾಗಿ ಹೋಗುತ್ತಾರೆ ಎಂಬುದು ಅರಿಯದ ಸತ್ಯವೇನಲ್ಲ..

ಮನೆಯ ಒಳಭಾಗದಲ್ಲಿ ಪುಟ್ಟದೊಂದು ಹಕ್ಕಿ ಬಂದು ಕುಳಿತರೂ ಉಶ್ ಎಂದು ಓಡಿಸುವ ನಮಗೆ ಆ ಪಕ್ಷಿಯಂತೆ ನಮ್ಮದೇ ಆದ ಗೂಡನ್ನು ಕಟ್ಟುವ ಕಲೆ
ಗೊತ್ತಿಲ್ಲ. ತನ್ನ ಮಡಿಲಲ್ಲಿ ಅಂತಹ ಸಾವಿರಾರು ಪಕ್ಷಿಗಳಿಗೆ ಜಾಗ ಕೊಡುವ ಮರವನ್ನು ನಾವು ಕಡಿದರೆ ಅದು ಮತ್ತೆಲ್ಲಿಗೆ ಹೋಗಬೇಕು?

ಆಗಾಗ ಕಾಡು ಪ್ರಾಣಿಗಳು ಹತ್ತಿರದ ಊರುಗಳಿಗೆ ಬಂದು ದಾಂಧಲೆ ಎಬ್ಬಿಸುತ್ತವೆ ಎಂಬ ಹುಯಿಲನ್ನು ನಾವು ಕೇಳುತ್ತೇವೆ. ಹಾಗೆ ಪ್ರಾಣಿಗಳು ಮಾಡಲು ಕಾರಣ ಈ ಮಂಚೆ ಅವುಗಳು ವಾಸಿಸುತ್ತಿದ್ದ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಾಡನ್ನು ನಾಡಾಗಿಸಿರುವುದರ ಪರಿಣಾಮವಾಗಿ ಅವುಗಳು ಕಾಡಿನ ಒಳಭಾಗದಲ್ಲಿ ಸೇರಿಕೊಂಡಿವೆ ಎಂಬುದು ನಿಜ ಆದರೆ ಅವುಗಳ ದೇಹದ ಕಣ ಕಣದಲ್ಲಿಯೂ ಇರುವ ತಮ್ಮ ಹಿಂದಿನ ದಿನಗಳ ವಾಸದ ನೆನಪಿನ ಜಾಡು ಹಿಡಿದು ಅವು ನಾಡಿನತ್ತ ಧಾವಿಸಿ ಬರುತ್ತವೆ, ಮತ್ತೆ ಕೆಲವೊಮ್ಮೆ ಆಹಾರ, ನೀರನ್ನು ಹುಡುಕಿ ಬರುತ್ತವೆ. ಬುದ್ಧಿಜೀವಿಗಳಾದ ನಾವು ನಮ್ಮ ನೆಲೆಯನ್ನು ಉಳಿಸಿಕೊಳ್ಳಲು ಅವುಗಳ ನೆಲೆಯನ್ನು ಕಸಿದುಕೊಂಡಿ ರುವುದು ತಪ್ಪಲ್ಲವೇ?

ನಮಗೆ ಅನ್ಯಾಯವಾದರೆ ಸಮಾಜ, ಹಿರಿಯರು, ಪೊಲೀಸರು, ನ್ಯಾಯಾಲಯ ಎಂದು ನಾವು ದೂರು ಹೇಳುತ್ತೇವೆ! ಪ್ರಾಣಿ-ಪಕ್ಷಿಗಳಿಗೆ ನೋವಾದರೆ ಅವು ಎಲ್ಲಿಗೆ ಹೋಗಬೇಕು?

ಕೆಲವೇ ವರ್ಷಗಳ ಹಿಂದೆ ಮೋಡಗಳ ಘರ್ಷಣೆಯಿಂದ ಪ್ರವಾಹದೋಪಾದಿಯಲ್ಲಿ ಮಳೆಯಾಗಿ ಚಾರ್ ಧಾಮಗಳಲ್ಲಿ ಒಂದಾದ ಕೇದಾರನಾಥ ಕ್ಷೇತ್ರದಲ್ಲಿ ಭೂಕುಸಿತ, ಪ್ರವಾಹ ಎಲ್ಲವೂ ಉಂಟಾದವು, ಸಾಕಷ್ಟು ಜನರ ಪ್ರಾಣ ಹಾನಿಗೆ ಕಾರಣವಾಯಿತು. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಸೆಡಿಮೆಂಟರಿ ರಾಕ್ ಎಂದು ನಾವು ಹೇಳುವ
ಅಷ್ಟೇನು ಗಟ್ಟಿಯಲ್ಲದ ಭೂಮಿಯನ್ನು ಹೊಂದಿರುವ ಆ ಭಾಗದಲ್ಲಿ ಅತಿ ಹೆಚ್ಚು ರಸ್ತೆ ಕಾಮಗಾರಿಗಳು ಮತ್ತು ಜಲಾಶಯಗಳನ್ನು ಕಟ್ಟುವ ಕಾರ್ಯವನ್ನು ಮಾಡಲಾಯಿತು. ಭಾರಿ ತೂಕದ ವಾಹನಗಳು ಕ್ರೇನ್ ಗಳು, ಜೆಸಿಬಿಗಳು ಮತ್ತು ಕಟ್ಟಡ ಕಾಮಗಾರಿ ಯಂತ್ರೋಪಕರಣಗಳು ಆ ಪರ್ವತ ಪ್ರದೇಶಗಳಲ್ಲಿ ಓಡಾಡಿದ ಪರಿಣಾಮ ಅಲ್ಲಿನ ಭೂಮಿಯಲ್ಲಿ ಕುಸಿತ ಉಂಟಾಗಲು ಕಾರಣವಾದರೆ ಮೋಡಗಳು ಸರಿಯಲು ಸಾಧ್ಯವಿಲ್ಲದಷ್ಟು ಎತ್ತರದ ಪರ್ವತಗಳ ನಡುವೆ ಅಪಾರ ಪ್ರಮಾಣದ ಘನೀಭವಿಸಿದ ನೀರನ್ನು
ಹೊತ್ತ ಮೋಡಗಳು ಸಿಲುಕಿಕೊಂಡು ಪ್ರತಿಕೂಲ ವಾತಾವರಣದ ಕಾರಣದಿಂದಾಗಿ ಮೇಘ ಸ್ಫೋಟವಾಗಿ ಪ್ರವಾಹ ಉಂಟಾಗಿ ಸಾವಿರಾರು ಜನ ಆ ಪ್ರವಾಹದಲ್ಲಿ ಕೊಚ್ಚಿ ಹೋದರು. ನೂರಾರು ಜನ ಮರಣ ಹೊಂದಿದರು. ಇಡೀ ಕ್ಷೇತ್ರದ ಜನ ತಮ್ಮ ಮನೆ, ಆಸ್ತಿ ಪಾಸ್ತಿಯನ್ನು ಕಳೆದುಕೊಂಡು ಅಕ್ಷರಶಹ ನಿರ್ಗತಿಕರಾದರು,.ಮತ್ತೆ ಕೆಲವರ ಭವ್ಯ ಭವಿಷ್ಯ ಮುರುಟಿ ಹೋಯಿತು.

ಇನ್ನು ನಾವು ವಾಸಿಸುತ್ತಿರುವ ಈ ಭೂಮಿಯನ್ನು ತಾಯಿ ಎಂದು ಪೂಜಿಸುವ ಜನನಿ, ಜನ್ಮ ಭೂಮಿ ಎಂದು ಪ್ರೀತಿಯಿಂದ ಭಕ್ತಿಯಿಂದ ಕರೆಯುವ ನಾವು ನಿಜವಾಗಿಯೂ ಆಕೆಯ ಮಕ್ಕಳಾಗಲು ಯೋಗ್ಯರೇ!? ಎಂದು ಪ್ರಶ್ನಿಸಿಕೊಂಡಾಗ ಖಂಡಿತವಾಗಿಯೂ ಇಲ್ಲ ಎಂಬ ಉತ್ತರ ಮುಖಕ್ಕೆ ರಾಚುತ್ತದೆ. ಯಾರಾದರೂ ತನ್ನ ತಾಯಿಯ ಮಡಿಲನ್ನು ಮಲಿನಗೊಳಿಸುತ್ತಾರೆಯೇ? ಕಸ ಸುರಿಯುತ್ತಾರೆಯೇ ಉಸಿರಿಗೆ ವಿಷ ಬೆರೆಸುತ್ತಾರೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ ಅಲ್ಲವೇ ?

ಬೃಹತ್ತಾದ ಕಾರ್ಖಾನೆಗಳು ತಮ್ಮ ಕಾರ್ಖಾನೆಯಿಂದ ಹೊರಬರುವ ತ್ಯಾಜ್ಯಗಳನ್ನು ನದಿಗಳಿಗೆ ಹರಿಯಬಿಡುತ್ತಾರೆ. ಆ ಮೂಲಕ ನದಿ ನೀರಿನಲ್ಲಿರುವ
ಜಲಚರಗಳಿಗೆ ಉಸಿರುಗಟ್ಟುವಂತೆ ಮಾಡುತ್ತಾರೆ ಮಾತ್ರವಲ್ಲ, ಆ ನೀರನ್ನು ಸೇವಿಸುವ ಜನರು ವಿವಿಧ ರೀತಿಯ ಶ್ವಾಸಕೋಶ ಸಂಬಂಧಿ ಮತ್ತು ಚರ್ಮ ಸಂಬಂಧಿ ರೋಗಗಳಿಗೆ ಈಡಾಗುವಂತೆ ಮಾಡುತ್ತಾರೆ.

ಒಳ್ಳೆಯ ಬೆಳೆಯನ್ನು ಪಡೆಯಲು ರೈತರು ಅತಿ ಹೆಚ್ಚು ಕ್ರಿಮಿನಾಶಕ ಮತ್ತು ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಭೂಮಿಯು ತನ್ನ ಸತ್ವವನ್ನು ಕಳೆದುಕೊಂಡು ಬಂಜರಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ದೇಶದ ಬಹಳಷ್ಟು ಭೂಪ್ರದೇಶವು ಸಾಗುವಳಿಗೆ ಯೋಗ್ಯವಲ್ಲದ ಸ್ಥಿತಿಯನ್ನು ತಲುಪುತ್ತದೆ ಎಂದರೆ ಆಶ್ಚರ್ಯವಿಲ್ಲ.. ಮನುಷ್ಯನ ಅತಿಯಾದ ಆಸೆ ಆತನನ್ನು ಅವೈಜ್ಞಾನಿಕ ರೀತಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುವತ್ತ ದೂಡುತ್ತಿದೆ. ಹೆಚ್ಚು ಲಾಭಗಳಿಸುವ ನಿಟ್ಟಿನಲ್ಲಿ ರೈತರು ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕಗಳಗಳನ್ನು ಮತ್ತು ಗೊಬ್ಬರಗಳನ್ನು ಬಳಸುತ್ತಿರುವುದರ ಪರಿಣಾಮವಾಗಿ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡಿದೆ.

ಇನ್ನು ಫ್ಯಾಕ್ಟರಿಗಳು, ವಾಹನಗಳು ಹೊರ ಹಾಕುವ ಹೊಗೆಯಿಂದಾಗಿ ಇಂಗಾಲದ ಆಮ್ಲ ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತಿದೆ. ಇಂಗಾಲದ ಆಮ್ಲ ವನ್ನು ಹೀರಿಕೊಳ್ಳುವಷ್ಟು ಸಸ್ಯ ಸಂಕುಲ ನಮ್ಮಲ್ಲಿ ಇಲ್ಲದೆ ಇರುವ ಕಾರಣ ನಮ್ಮ ಸುತ್ತಲ ವಾತಾವರಣ ಅತ್ಯಂತ ಕಲುಷಿತವಾಗಿದೆ. ವಾಯು ಮಾಲಿನ್ಯ ಹೆಚ್ಚಾಗಿದೆ. ಅದರಲ್ಲೂ ಅತಿಯಾದ ಟ್ರಾಫಿಕ್ ನಿಂದಾಗಿ ದೇಶದ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚಿನ ವಾಯುಮಾಲಿನ್ಯ ಉಂಟಾಗಿದ್ದು 50 ವರ್ಷ ಮೇಲ್ಪಟ್ಟ ಎಲ್ಲರಿಗೂ ವಾಯು ಮಾಲಿನ್ಯವು ಅಸ್ತಮಾ, ದಮ್ಮು, ಕೆಮ್ಮು, ಮುಂತಾದ ಉಸಿರಾಟ ಸಂಬಂಧಿ ತೊಂದರೆಗಳಿಂದ ಮತ್ತು ಚರ್ಮ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡಿದೆ.

ಇವೆಲ್ಲಕ್ಕಿಂತಲೂ ಮುಖ್ಯವಾಗಿ ಕಳೆದ ಎರಡು ದಶಕಗಳಿಂದ ನಮ್ಮಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಎಂಬ ಪೆಡಂಭೂತ. ಊಟಕ್ಕೆ ಬಳಸುವ ತಟ್ಟೆ, ಲೋಟಗಳಿಂದ ಹಿಡಿದು ಕುರ್ಚಿ ಟೇಬಲ್ಲುಗಳವರೆಗೆ ಪ್ಲಾಸ್ಟಿಕ್ ನದ್ದೇ ಕಾರುಬಾರು. ಇನ್ನು ಮದುವೆ ಮುಂಜಿಗಳಲ್ಲಿಯೂ ಕೂಡ ಬಳಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ಉಪಯೋಗಿಸುವ ಕಾರಣ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತದೆ. ಇನ್ನು ಪ್ಲಾಸ್ಟಿಕ್ ಕವರ್ ಗಳು ಅಬ್ಬಬ್ಬಾ! ಹೇಳಲು ಸಾಧ್ಯವಿಲ್ಲ. ಮಾರುಕಟ್ಟೆಗೆ ಹೋದರೆ ತರುವ ಪ್ರತಿಯೊಂದು ವಸ್ತುವು ಕೂಡ ಪ್ಲಾಸ್ಟಿಕ್ ಕವರಿನಲ್ಲಿಯೇ ಬರುತ್ತದೆ ದಿನಬಳಕೆಯ ದಿನಸಿ ಅಂಗಡಿ, ತರಕಾರಿ ಅಂಗಡಿಗಳಲ್ಲಿ ಕೊಡುವ ಪ್ಲಾಸ್ಟಿಕ್ ಕವರ್ ಗಳಂತೂ 40 ಮೈಕ್ರೋನ್ಗಿಂತಲೂ ಕಡಿಮೆ ದಪ್ಪವನ್ನು ಹೊಂದಿದ್ದು ಒಂದು ಬಾರಿ ಬಳಕೆ ಮಾಡಿ ಎಸೆಯಲ್ಪಡುತ್ತವೆ. ಈ ಪ್ಲಾಸ್ಟಿಕ್ ನ ಅತಿ ದೊಡ್ಡ ತೊಂದರೆ ಎಂದರೆ ಇದು ನೀರಿನಲ್ಲಿ ಕರಗದು, ಭೂಮಿಯ ಮಣ್ಣಲ್ಲಿ ಮಣ್ಣಾಗದು ಆಕಾಶದಲ್ಲಿ ಮರೆಯಾಗದು. ಬಳಕೆಯ ದೃಷ್ಟಿಯಿಂದ ಯೋಗ್ಯವಲ್ಲದ ಗಾತ್ರದ ಪ್ಲಾಸ್ಟಿಕ್ ಕವರ್ ಗಳು ಭೂಮಿಯ ಎಲ್ಲ ಭಾಗದಲ್ಲಿಯೂ ವಿವೇಚನಾ ರಹಿತವಾಗಿ ಬಳಸಲ್ಪಡುತ್ತಿದ್ದು ಅವುಗಳ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಕಷ್ಟವಾಗಿದೆ.

ಒಂದೆರಡು ದಶಕಗಳ ಹಿಂದೆ ಮುಂಬೈಯಲ್ಲಿ ವಿಪರೀತ ಮಳೆಯಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಾಗ ಕಾರಣವನ್ನು ಹುಡುಕಿದ ಬೃಹತ್ ಮುಂಬಯಿ ಮಹಾನಗರ ಪಾಲಿಕೆಗೆ ದೊರೆತ ತೊಂದರೆಯ ಮೂಲ ಪ್ಲಾಸ್ಟಿಕ್. ಪ್ಲಾಸ್ಟಿಕ್ ನ ಹಾಳೆಗಳನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಇದ್ದುದರ ಪರಿಣಾಮವಾಗಿ ಚರಂಡಿಗಳ ಬಾಯಿಗೆ ಹೋಗಿ ಸಿಲುಕಿದ ಪ್ಲಾಸ್ಟಿಕ್ ಗಳು ನೀರನ್ನು ಹೊರ ಹಾಕಲು ಸಾಧ್ಯವಾಗದೆ ಅಲ್ಲಲ್ಲಿ ಚರಂಡಿಗಳು ಕಟ್ಟಿಕೊಂಡು ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು ಎಂಬ ವರದಿಯನ್ನು ಕೇಳಿ ಬಾಯಿಯ ಮೇಲೆ ಬೆರಳಿಟ್ಟುಕೊಂಡವರು ಬಹಳಷ್ಟು ಜನ.

ಇದೀಗ ಪ್ಲಾಸ್ಟಿಕ್ ಎಂಬ ರಕ್ತ ಬೀಜಾಸುರನ ಸಂತತಿ ಇಡೀ ಭೂಮಿಯನ್ನು ಆವರಿಸಿದ್ದು ಈ ಪ್ಲಾಸ್ಟಿಕ್ ಅನ್ನು ನುಂಗಿ ಹಾಕುವ ದೇವತೆಗಾಗಿ ನಾವು ಕಾಯಬೇಕಾಗಿದೆ.

ಪರಿಸರ ಜಾಗೃತಿ ಎಂಬುದು ಕೇವಲ ಒಂದು ದಿನ ಸಸಿಯನ್ನು ನೆಟ್ಟು ಫೋಟೋಗೆ ಪೋಸ್ ಕೊಟ್ಟು ಪರಿಸರ ಉಳಿಸುವ ಕುರಿತು ಒಂದೆರಡು ಮಾತುಗಳನ್ನಾಡಿ ಮುಗಿಸಿದರೆ ಆಯ್ತು ಎಂಬ ಭಾವ ಖಂಡಿತವಾಗಿಯೂ ಬೇಡ. ಪರಿಸರ ದಿನಾಚರಣೆ ಸಾಮಾಜಿಕ ಜಾಗೃತಿಯಾಗಿ ಬದಲಾಗಲಿ. ಪರಿಸರ ದಿನಾಚರಣೆ ವೃಕ್ಷ ಸಂಪತ್ತನ್ನು ಹೆಚ್ಚಿಸುವ ಅಭಿಯಾನವಾಗಲಿ. ಪರಿಸರ ದಿನಾಚರಣೆಯ ಮೂಲಕ ನಾವು ಪರಿಸರಕ್ಕೆ ಹಾನಿ ಮಾಡುವ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಇಲ್ಲವೇ ನಿಷೇಧಿಸುವುದಕ್ಕೆ ಪ್ರಯತ್ನ ಮಾಡಬೇಕು.

ಪರಿಸರವನ್ನು ನಮಗಾಗಿ ನಾವು ಉಳಿಸಿಕೊಳ್ಳುವ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಬಿಟ್ಟು ಕೊಡುವ ಅತಿ ದೊಡ್ಡ ಉಡುಗೊರೆಯಾಗಿ ನಾವು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ. ಸಾಧ್ಯವಾದಷ್ಟು ಪರಿಸರಕ್ಕೆ ಹತ್ತಿರವಾದ ವಸ್ತುಗಳ ಬಳಕೆ ಮಾಡೋಣ ಎಷ್ಟೇ ಅವಸರದಲ್ಲಿದ್ದರೂ ಕೂಡ ನಿಧಾನವಾಗಿ ಇಲ್ಲವೇ ಸ್ಥಿರವಾಗಿ ಗಾಡಿಯನ್ನು ಚಲಾಯಿಸೋಣ. ನಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಮೂಲಕ ವಾಯು ಮಾಲಿನ್ಯವನ್ನು ಕಡಿಮೆ ಮಾಡೋಣ.

ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ , ಪರಿಸರ ಜಾಗೃತಿ ಎಂಬುದು ನಮ್ಮ ಬದುಕಿನ ಬಹುದೊಡ್ಡ ಅಭಿಯಾನವಾಗಲಿ ಮತ್ತು ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಂದು ಜೀವಿಯು ಪರಿಸರ ಪ್ರಜ್ಞೆಯನ್ನು ತನ್ನಲ್ಲಿ ಬೆಳೆಸಿಕೊಳ್ಳಲಿ ಅಂದಾಗ ಮಾತ್ರ ಪರಿಸರ ದಿನಾಚರಣೆಯನ್ನು ಆಚರಿಸಿದ್ದಕ್ಕೂ ಸಾರ್ಥಕ ಎಂಬುದು ನನ್ನ ಅನಿಸಿಕೆ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ