Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಳ್ಳಿಯ ಹೆಣ್ಣು ಮಗಳು ಮತ್ತು ಸಾಲವೆಂಬ ಸುಳಿ

ಎರಡು ದಶಕಗಳ ಹಿಂದೆ....
ನಾನು ಓರ್ವ ಹಳ್ಳಿಯ ಹೆಣ್ಣು ಮಗಳು. ನಸುಕಿನ ಜಾವದಲ್ಲಿ ಎದ್ದು ಮನೆಯ ಕಸ ಗುಡಿಸಿ ದಂದಕ್ಕಿಯಲ್ಲಿರುವ ಜಾನುವಾರುಗಳ ಕೆಳಗಿನ ಸಗಣಿ ಕಸ ಹೊಡೆದು ಬಿದಿರು ಪುಟ್ಟಿಗೆ ತುಂಬಿ ಮನೆಯ ಹಿತ್ತಲಿಗೆ ಒಯ್ದು ಮಟ್ಟಸವಾಗಿ ಬಡಿದು ಬೆರಣಿಯನ್ನು ತಟ್ಟಿ ಗೋಡೆಗೆ ಹಚ್ಚಿ ಒಣಗಿಸಲು ಬಿಟ್ಟು ಬರುತ್ತಿದ್ದೆ. ಮಗ ದನಗಳಿಗೆ ಹೊಟ್ಟು ಮೇವು ಹಾಕಿ ಕಲ್ಲ ಬಾನಿಗೆ ನೀರನ್ನು ತುಂಬಿಸಿ ನೀರು ಕುಡಿಸುತ್ತಿದ್ದ
ಒಲೆಯ ಮೇಲೆ ಚಹಕ್ಕೆ ಎಸರಿಟ್ಟು ಹಾಲನ್ನು ಹಿಂಡಿಕೊಂಡು ಬಂದು ಮನೆಯ ಎಲ್ಲಾ ಸದಸ್ಯರಿಗೂ ಚಹಾ ಮಾಡಿ ಕೊಡುತ್ತಿದ್ದೆ.. ಚಹಾ ಕುಡಿಯುತ್ತ ಆ ದಿನದ ಕೆಲಸ ಕಾರ್ಯಗಳ ಕುರಿತು ಚರ್ಚೆ ನಡೆದು ಯಾರ್ಯಾರು ಏನೇನು ಮಾಡಬೇಕು ಎಂಬುದನ್ನು ಅಪ್ಪ ಮಕ್ಕಳು ನಿರ್ಣಯಿಸಿದ ನಂತರ ಎಲ್ಲರೂ ತಂತಮ್ಮ ನಿತ್ಯ ಕರ್ಮಗಳನ್ನು ಪೂರೈಸಲು ಹೊರಡುತ್ತಿದ್ದರು.. ಮುಂಜಾನೆಯ ಚಹಾ ಕುಡಿಯುವ ಸಮಯ ನಮ್ಮೆಲ್ಲರ ಪಾಲಿಗೆ ಪೇಟೆಯ ಭಾಷೆಯ ಫ್ಯಾಮಿಲಿ ಟೈಮ್ ಆಗಿತ್ತು

ಮೊದಲು ಜಳಕ ಮಾಡಿ ಹಣೆಗೆ ಮೂರು ಬಟ್ಟು ವಿಭೂತಿ ಹಚ್ಚಿಕೊಂಡು ದೇವರಿಗೆ ಕೈಮುಗಿದು ಅಡುಗೆ ಮನೆಗೆ ಬರುವ ನಾನು ಒಲೆಯ ಮೇಲೆ ಹೆಸರು ಕಾಳು ಕುದಿಯಲಿಟ್ಟು ನಿನ್ನೆಯ ದಿನ ಹೊಲದಿಂದ ತಂದ 4 ಹೀರೆಕಾಯಿಯನ್ನು, ಈರುಳ್ಳಿಯನ್ನು ಹೆಚ್ಚಿ ಪಲ್ಯಕ್ಕೆ ಒಗ್ಗರಣೆ ಕೊಟ್ಟು ಅದನ್ನು ಕುದಿಯಲು ಬಿಟ್ಟು ಒಂದೆಂಟು ಬೆಳ್ಳುಳ್ಳಿ ಪಳಕುಗಳಿಗೆ ಖಾರ ಉಪ್ಪು ಹಾಕಿ ಕಲ್ಲಿನಲ್ಲಿ ಅರೆದು ಬಟ್ಟಲಲ್ಲಿ ತುಂಬಿಟ್ಟು ಮತ್ತೊಂದು ದೊಡ್ಡ ಒಲೆಯ ಮೇಲೆ ನೀರಿಗೆ ಎಸರಿಟ್ಟು ಒಂದು ಸೇರಿಗೂ ಮಿಗಿಲು ಜೋಳದ ಹಿಟ್ಟನ್ನು ಜರಡಿಯಾಡಿ ಅದಕ್ಕೆ ಕುದಿಯುವ ನೀರನ್ನು ಹಾಕಿ ಮುಚ್ಚಿಟ್ಟು ಕೆಲ ಹೊತ್ತಿನ ನಂತರ ಚರಚರನೆ ನಾದಿ ರೊಟ್ಟಿ ತಟ್ಟಲು ಆರಂಭಿಸಿದರೆ ಮನೆಯ ಸದಸ್ಯರೆಲ್ಲ ಒಬ್ಬೊಬ್ಬರಾಗಿ ಜಳಕ ಮಾಡಿ ವಿಭೂತಿಯನ್ನು ಧರಿಸಿ ದೇವರಿಗೆ ನಮಸ್ಕರಿಸಿ ಬಂದು ಕುಳಿತುಕೊಳ್ಳುತ್ತಿದ್ದರು. ಅವರೆಲ್ಲರಿಗೂ ಮುಂಚೆ ಜಳಕ ಮಾಡಿ ಹೊಸಿಲು ತೊಳೆದು ರಂಗೋಲಿ ಇಟ್ಟು ಪೂಜೆ ಮಾಡಿದ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳು ಹೀರೇಕಾಯಿ ಪಲ್ಯ, ಕುದ್ದ ಹೆಸರು ಕಾಳಿನ ಮೇಲೆ ಬೆಳ್ಳುಳ್ಳಿ ಪುಡಿ ಹಾಕಿ ತುಸು ಕಾಯಿಸಿದ ಎಣ್ಣೆ ಹಾಕಿ ಹೊಲದ ಬದಿಯಲ್ಲಿ ಬೆಳೆದ ಹಕ್ಕರಕಿ ಮೆಂತ್ಯ ಸೊಪ್ಪುಗಳನ್ನು( ಅಪ್ಪನಿಗೆ ಮಾತ್ರ ಜಜ್ಜಿದ ಈರುಳ್ಳಿ ) ತೊಳೆದು ಹಾಕಿದರೆ ಒಬ್ಬೊಬ್ಬರು ಬಿಸಿಬಿಸಿಯಾದ ಹೊಟ್ಟೆ ಉಬ್ಬಿದ ತುಸು ದಪ್ಪನೆಯ ನಾಲ್ಕು ರೊಟ್ಟಿ ತಿಂದು ತಂಬಿಗೆ ನೀರು ಕುಡಿದು ಏಳುತ್ತಿದ್ದರು.
ಅಪ್ಪ ಮಗ ಎತ್ತನ್ನು ಹೊಡೆದುಕೊಂಡು ಹೊಲಕ್ಕೆ ಹೋದರೆ ಮಗಳು ತನ್ನ ಊಟದ ಡಬ್ಬಿ ಕಟ್ಟಿಕೊಂಡು ಶಾಲೆಗೆ ಹೊರಡುತ್ತಾಳೆ.... ಮಗನಿಗೆ ಓದು, ತಲೆಗೆ ಹತ್ತಲಿಲ್ಲವೋ ಅಥವಾ ಹೊಲ ಮನೆಯ ಕೆಲಸಗಳಲ್ಲಿ
ಓದುವ ಮನಸ್ಸಾಗಲಿಲ್ಲವೋ ಗೊತ್ತಿಲ್ಲ ಅಂತೂ ಓದಿಗೆ ಎಳ್ಳು ನೀರು ಬಿಟ್ಟು ಆತ ತನ್ನ ಅಪ್ಪನ ಹಾಗೆ ಒಕ್ಕಲುತನವನ್ನು ತನ್ನದಾಗಿಸಿಕೊಂಡ.
ಹೀಗೆ ಅಪ್ಪ ಮಕ್ಕಳು ತಮ್ಮ ಕೆಲಸಗಳಿಗೆ ಹೋದ ನಂತರ ನಾನೂ ರೊಟ್ಟಿ ತಿಂದು,ಉಂಡ ನಾಲ್ಕು ತಟ್ಟೆಗಳನ್ನು ತೊಳೆದಿಟ್ಟು, ಉಳಿದ ರೊಟ್ಟಿಯ ಬುತ್ತಿ ಕಟ್ಟಿಕೊಂಡು ತಲೆ ಬಾಚಿ ಓರಣವಾಗಿಸಿಕೊಂಡು ಬಚ್ಚಲಿನಲ್ಲಿದ್ದ ಮನೆಯವರೆಲ್ಲರ ಒಗೆಯುವ ಬಟ್ಟೆಗಳನ್ನು ಗಂಟು ಕಟ್ಟಿ ತಲೆಯ ಮೇಲೆ ಬುತ್ತಿಯ ಗಂಟು ಬಗಲಲ್ಲಿ ಬಟ್ಟೆಯ ಗಂಟನ್ನು ಹಿಡಿದು ದಂದಕ್ಕಿಗೆ ಬಂದು ಅಲ್ಲಿಯೇ ಕಟ್ಟಿಹಾಕುತ್ತಿದ್ದ ಆಕಳನ್ನು ಹೊಡೆದುಕೊಂಡು ಮನೆಯ ಬಾಗಿಲಿಗೆ ಅಗುಳಿ ಹಾಕಿ ದಾರಿಯಲ್ಲಿ ಸಿಕ್ಕ ಅವರಿವರೊಂದಿಗೆ ಮಾತನಾಡುತ್ತಾ ಮುಂದೆ ಸಾಗಿ ಊರ ಹೊರಗೆ ಬಂದರೆ ಮೂರನೆಯ ಹೊಲವೇ ನಮ್ಮದು. ಇರುವ ಎರಡು ಎಕರೆ ಹೊಲದಲ್ಲಿ ಸಿಹಿ ನೀರಿನ ಬಾವಿ ಇದ್ದು ನಮ್ಮ ಎಲ್ಲಾ ಅವಶ್ಯಕತೆಗಳನ್ನು ನೀಗಿಸುವಷ್ಟು ನೀರಿನ ಒರತೆ ಇತ್ತು. ಅಲ್ಲಿಯೇ ಮರದ ನೆರಳಿನಲ್ಲಿ ಬುತ್ತಿಯ ಗಂಟನ್ನು ಇಟ್ಟು ಆಕಳನ್ನು ಮೇಯಲು ಬಿಟ್ಟು ಬಾವಿಯ ಬಳಿ ಇದ್ದ ಪುಟ್ಟ ಕಲ್ಲು ಬಾನಿಯಲ್ಲಿ ತುಂಬಿದ ನೀರಿನಲ್ಲಿ ಎಲ್ಲ ಬಟ್ಟೆಗಳನ್ನು ಒಗೆದು ಒಣ ಹಾಕಿ ಕೈ ಕಾಲು ಮುಖ ತೊಳೆದು ಬರುವಷ್ಟರಲ್ಲಿ ತಮ್ಮ ಹೊಲದ ಕೆಲಸ ಮುಗಿಸಿ ಅಪ್ಪ ಮಗ ಕೂಡ ಕೈ ಕಾಲು ತೊಳೆದು ಊಟಕ್ಕೆ ಬಂದು ಕುಳಿತುಕೊಳ್ಳುತ್ತಿದ್ದರು
ಮರದ ನೆರಳಿನಲ್ಲಿ ಕುಳಿತು ನಾವು ಮೂರು ಜನ ಬುತ್ತಿ ಬಿಚ್ಚಿಕೊಂಡು ಊಟ ಮಾಡುತ್ತಿದ್ದೆವು.. ಊಟ ಮಾಡಿದ ಮೇಲೆ ನನ್ನ ಪತಿ ತುಸು ವಿಶ್ರಾಂತಿ ಪಡೆದರೆ ನಾನು ಅಲ್ಲಿಯೇ ಬೆಳೆಯುತ್ತಿರುವ ಸೊಪ್ಪುತರಕಾರಿಗಳ ದೇಖರೇಖಿಯಲ್ಲಿ ತೊಡಗಿಕೊಳ್ಳುತ್ತಿದ್ದೆ.. ಪಕ್ಕದ ಹೊಲದಲ್ಲಿರುವ ವಾರಿಗೆಯ ಸ್ನೇಹಿತರೊಂದಿಗೆ ಮಾತನಾಡಲು ಮಗ ಹೋಗುತ್ತಿದ್ದ.ಅರೆಘಳಿಗೆಯ ವಿಶ್ರಾಂತಿಯ ನಂತರ ನನ್ನ ಗಂಡ ಎದ್ದು ಮುಖ ತೊಳೆದು ಮತ್ತೆ ತನ್ನ ಕೆಲಸಕ್ಕೆ ನಿಂತರೆ ಮಗ ಓಡೋಡಿ ಬಂದು ಅಪ್ಪನಿಗೆ ಜೊತೆಗೂಡುತ್ತಿದ್ದ.. ನಾನು ಹಸುವಿಗಾಗಿ ಪಕ್ಕದ ಗುಡ್ಡೆಯಲ್ಲಿ ಬೆಳೆದ ಹಸಿ ಹುಲ್ಲನ್ನು ಕೊಯ್ದು ತಂದು ಗಂಟು ಕಟ್ಟಿ ಅಲ್ಲಿಯೇ ಬೆಳೆಸಿರುವ ದಾಸವಾಳ ಕಣಗಿಲೆ ಮಲ್ಲಿಗೆ ಹೂಗಳನ್ನು ಬಿಡಿಸಿ ಒಂದು ಬುಟ್ಟಿಯಲ್ಲಿ ತಂದಿಟ್ಟು ಒಣ ಹಾಕಿದ ಎಲ್ಲ ಬಟ್ಟೆಗಳನ್ನು ಮಡಚಿ ಅದೇ ಬುಟ್ಟಿಯಲ್ಲಿ ಮತ್ತೊಂದೆಡೆ ಇಟ್ಟು, ಒಂದು ಕೊಡ ಸೀ ನೀರನ್ನು ತುಂಬಿ ತಂದಿಟ್ಟುಕೊಳ್ಳುತ್ತೇನೆ. ಅಷ್ಟು ಹೊತ್ತಿಗೆ ಪಡುವನ ದಿಕ್ಕಿನಲ್ಲಿ ಸೂರ್ಯ ಮುಳುಗಲು ಆರಂಭಿಸುತ್ತಾನೆ. ಲಗುಬಗೆಯಿಂದ ನಾಳೆಗೆ ಬೇಕಾಗುವ ತರಕಾರಿ, ಸೊಪ್ಪುಗಳನ್ನು ಹರಿದುಕೊಂಡು ಬುಟ್ಟಿಗೆ ತುಂಬುತ್ತಿದ್ದ ನಾನು ಮತ್ತೆ ಹಸುವನ್ನು ಹೊಡೆದುಕೊಂಡು ಮನೆಗೆ ಮರಳುತ್ತಿದ್ದೆ.
ಅಷ್ಟೊತ್ತಿಗಾಗಲೇ ಶಾಲೆಯಿಂದ ಮನೆಗೆ ಬಂದ ಮಗಳು ಮನೆಯ ಕಸ ಗುಡಿಸಿ ಕೈ ಕಾಲು ಮುಖ ತೊಳೆದು ದೇವರಿಗೆ ದೀಪ ಮುಡಿಸಿ ಓದಲು ಕುಳಿತುಕೊಳ್ಳುತ್ತಾಳೆ. ನಾನು ಕೂಡ ಎಲ್ಲ ವಸ್ತುಗಳನ್ನು ಆಯಾ ಜಾಗಕ್ಕೆ ಇಟ್ಟು ಹಸುವನ್ನು ಅದರ ಜಾಗದಲ್ಲಿ ಕಟ್ಟಿ ಮೇವನ್ನು ಹಾಕಿ ಹಿತ್ತಲಿಗೆ ಹೋಗಿ ಕೈ ಕಾಲು ಮುಖ ತೊಳೆದು ದೇವರಿಗೆ ನಮಸ್ಕರಿಸಿ ಚಹಕ್ಕೆ ಎಸರಿಡುತ್ತೇನೆ. ಇನ್ನೇನು ಚಹಾ ಕುದಿದು ಹಾಲು ಹಾಕಿ ಕೆಳಗಿಳಿಸುವಷ್ಟರಲ್ಲಿ ಮನೆಗೆ ಮರಳುವ ಅಪ್ಪ ತಮ್ಮ ಗಳೆಯ ಸಾಮಾನುಗಳನ್ನು ಗೂಟಕ್ಕೆ ನೇತುಹಾಕಿ, ಮಗ ದನಗಳನ್ನು ದಂದಕ್ಕಿಯಲ್ಲಿ ಕಟ್ಟುತ್ತಿದ್ದ. ಕೈಕಾಲು ಮುಖ ತೊಳೆದು ನಡುಮನೆಯಲ್ಲಿ ಬಂದು ಕೂತು ಮತ್ತೊಮ್ಮೆ ಎಲ್ಲರೂ ಸೇರಿ ಚಹಾ ಕುಡಿದು ಅಂದಿನ ಆಗುಹೋಗುಗಳನ್ನು ಚರ್ಚಿಸುತ್ತಿದ್ದೆವು

ತುಸು ಹೊತ್ತಿನ ನಂತರ ಮಗಳು ಓದಲು ಕುಳಿತರೆ ಮಗ ತನ್ನ ಸ್ನೇಹಿತರನ್ನೂ ಭೇಟಿಯಾಗಲು ಊರ ಹೊರಗಿನ ಹನುಮಪ್ಪನ ಗುಡಿಯ ಕಟ್ಟೆಗೆ ಹೋಗುತ್ತಿದ್ದ.... ನನ್ನ ಗಂಡ ಕೂಡ ಮನೆಯ ಮುಂದಿನ ಬಸವಣ್ಣನ ಗುಡಿಯ ಪೂಜಾರಿಯೊಂದಿಗೆ
ಆ ವರ್ಷದ ಮಳೆ ಬೆಳೆ ಊರಿನ ಆಗುಹೋಗುಗಳ ಕುರಿತು ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದ.
ಓದುತ್ತಿರುವ ಮಗಳಿಗೆ ತೊಂದರೆಯಾಗಬಾರದು ಎಂದು ಮನೆಯ ಕಟ್ಟೆಯ ಮೇಲೆ ಕುಳಿತುಕೊಳ್ಳುವ ನನ್ನನ್ನು ಭೇಟಿಯಾಗಲು ಪಕ್ಕದ ಮನೆಯ ಗೆಳತಿ ಬಂದು ಕೊಡುತ್ತಿದ್ದಳು.. ತುಸು ಹೊತ್ತು ಮಾತನಾಡುತ್ತಾ ಕುಳಿತುಕೊಳ್ಳುವ ನಾವುಗಳು ಮತ್ತೆ ರಾತ್ರಿಯ ಅಡುಗೆ ತಯಾರಿಗಾಗಿ ಅಡುಗೆಮನೆ ಸೇರುತ್ತಿದ್ದೆ. ಮುಂಜಾನೆಯೇ ಮಾಡಿಟ್ಟ ಜೋಳದ ನುಚ್ಚಿಗೆ ಮಜ್ಜಿಗೆ ಸಾರು ಇಲ್ಲವೇ ಬೇಳೆಯ ಸಾರನ್ನು ಮಾಡಿ, ಮಕ್ಕಳಿಬ್ಬರಿಗೂ ತುಸು ಅನ್ನವನ್ನು ಮಾಡಿಡುವ ಹೊತ್ತಿಗೆ ಮನೆ ಸೇರುವ ಗಂಡ, ಮಗನೊಂದಿಗೆ ನಡುಮನೆಯಲ್ಲಿ ನಾನು ಕುಳಿತುಕೊಂಡರೆ ಮಗಳು ಎಲ್ಲರಿಗೂ ಊಟಕ್ಕೆ ಬಡಿಸಿ ತಾನೂ ಕೂಡ ಕೊಡ ನಮ್ಮೊಂದಿಗೆ ಕುಳಿತು ಊಟ ಮಾಡುತ್ತಿದ್ದಳು.
ಊಟದ ನಂತರ ನಾವಿಬ್ಬರೂ ದಂಪತಿಗಳು ನಮ್ಮದೇ ಹೊಲದ ಬಾವಿಯ ಬಳಿ ಬೆಳೆದ ಎಲೆ ಬಳ್ಳಿಯ ವೀಳ್ಯದೆಲೆಗೆ ಅಡಿಕೆ ಸುಣ್ಣ ಸವರಿ ಮೆದ್ದರೆ ಮಗ ದನಗಳಿಗೆ ಮತ್ತಷ್ಟು ಮೇವನ್ನು ಹಾಕಿ ಅವುಗಳ ಮೈ ಸವರಿ ನೀರು ಕುಡಿಸಿ ಮಲಗಲು ಮನೆಯ ಮುಂದಿನ ಕಟ್ಟೆಯ ಮೇಲಿನ ಬಂಕದ ಕೋಣೆಗೆ ತೆರಳುತ್ತಾನೆ.
ನಾನು ಮೊಸರಿಗೆ ಹೆಪ್ಪು ಹಾಕಿ ಹಾಸಿಗೆ ಸಿದ್ದಪಡಿಸಿದರೆ ಮಗಳು ಅಡಿಗೆ ಮನೆಯನ್ನು ಸ್ವಚ್ಛಗೊಳಿಸುತ್ತಾಳೆ.
ಮುಂದಿನ ಅರ್ಧ ಗಂಟೆಯಲ್ಲಿ ಮುಂಜಾನೆಯಿಂದ ದುಡಿದು ದಣಿದು ಹೈರಾಣಾದ ಮನೆಯವರೆಲ್ಲರೂ ನಿದ್ದೆಗೆ ಜಾರಿದರೆ ಎಚ್ಚರವಾಗುವುದು ಮರುದಿನ ಮುಂಜಾನೆಯ ಕೋಳಿ ಕೂಗಿದಾಗಲೇ.
ಅತ್ಯಂತ ಆಡಂಬರವಲ್ಲದಿದ್ದರೂ ನಿಕೃಷ್ಟವಾಗಿರಲಿಲ್ಲ ಬದುಕು.. ನಮ್ಮದೇ ದುಡಿಮೆಯಲ್ಲಿ ಹೊಟ್ಟೆ ತುಂಬಾ ಎರಡು ಹೊತ್ತು ಊಟ ಮಾಡಿ ಮೈತುಂಬ ಬಟ್ಟೆ ಧರಿಸಲು ಏನೂ ಕಮ್ಮಿಯಾಗಿರಲಿಲ್ಲ....
ಆದರೆ ವಿಧಿಗೆ ಸಹಿಸಲು ಆಗಲಿಲ್ಲವೋ ಏನೋ?

ಇಂದಿನ ದಿನ
ಕೋಳಿ ಕೂಗಿದ ಮೇಲೆ ನಿಧಾನವಾಗಿ ಎದ್ದು ಕುಳಿತಲ್ಲಿಯೇ ಪೂರ್ವದತ್ತ ಮುಖ ಮಾಡಿ ಕಾಣದ ದೇವರಿಗೆ ನಮಸ್ಕರಿಸಿ ತಲೆಯ ಕೂದಲನ್ನು ನೇರ್ಪು ಮಾಡಿಕೊಂಡು ಹಾಸಿಗೆಯಿಂದ ಹೇಳುವ ನನಗೆ ಮೊದಲಿನಂತೆ ಯಾವ ಕೆಲಸವನ್ನೂ ಸರಾಗವಾಗಿ ಮಾಡಲು ಸಾಧ್ಯವಾಗುತ್ತಿಲ್ಲ.
ಮಗಳು ಪಿಯುಸಿ ಓದಿ ಶಿಕ್ಷಕರ ತರಬೇತಿ ಪಡೆದ ಎರಡೇ ವರ್ಷಗಳಲ್ಲಿ ಆಕೆಯ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದೆವು. ಹೆಚ್ಚಿನ ಆದಾಯವಿಲ್ಲದ ನಾವು ಆಕೆಯ ಉದ್ಯೋಗಸ್ಥ ಪತಿಗೆ ನಮ್ಮ ಕೈಲಾದಷ್ಟು ಮರ್ಯಾದೆ ಮಾಡಬೇಕೆಂದು ಫೈನಾನ್ಸ್ ಒಂದರಲ್ಲಿ
ನನ್ನ ಗಂಡ ಬಡ್ಡಿಗೆ ಸಾಲ ತಂದಿದ್ದ. ಮದುವೆಯನ್ನೇನೋ ಮಾಡಿದೆವು ನಗುನಗುತ್ತಾ ಗಂಡನ ಮನೆಗೆ ಮಗಳು ಹೋದಳು. ಆದರೆ ಆ ವರ್ಷ ಮಳೆ ಆಗದೆ ಬೆಳೆ ಕೈಗೆ ಬರಲೇ ಇಲ್ಲ. ದವಸ ಧಾನ್ಯಗಳ ಚೀಲಗಳು ಬರಿದಾಗಿ ದಿನದ ಬದುಕಿಗೆ ತತ್ವಾರವಾಯಿತು
ತಂದ ಸಾಲದ ಹಣಕ್ಕೆ ಬಡ್ಡಿ ಕಟ್ಟಲು ಸಾಧ್ಯವಾಗದೆ
ಫೈನಾನ್ಸ್ ನವರು 2 ಎತ್ತುಗಳನ್ನು ಹೊಡೆದುಕೊಂಡು ಹೋದರು. ಮಳೆ ಇಲ್ಲದೆ ಬೆಳೆ ಇಲ್ಲ... ತನ್ನೆರಡು ಕಣ್ಣುಗಳಂತಿದ್ದ ಎತ್ತುಗಳನ್ನು ಕಳೆದುಕೊಂಡ ಗಂಡನಿಗೆ
ಇದೇ ಚಿಂತೆಯಿಂದಾಗಿ ಎದೆ ನೋವು ಬಂದು ಆತ ಮುಂದಿನ ಎರಡು ಮಳೆಗಾಲ ಮುಗಿಯುವುದರೊಳಗಾಗಿ ಶಿವನಿಗೆ ಪ್ರಿಯನಾದ.

ಇದರ ಮಧ್ಯದಲ್ಲಿಯೇ ಮಗಳು ಬಸಿರಿಯಾಗಿ ಆಕೆಯ ಬಯಕೆ ಬಾಣಂತನ ತೊಟ್ಟಲು ಬಟ್ಟಲು ಎಂದು ಮತ್ತೆ ಸಾಲ ಮಾಡಿದೆವು.ಮನೆಯ ರಿಪೇರಿ ಕಾರ್ಯಕ್ಕೆ, ಆತನ ಮದುವೆಗೆ ಮತ್ತಷ್ಟು ಸಾಲದ ಹಣಕ್ಕೆ ಕೈ ಚಾಚಿದೆವು.
ಬರ ಪರಿಸ್ಥಿತಿ ಮತ್ತೊಂದು ವರ್ಷ ಮುಂದುವರಿದಾಗ
ಸಾಲ ಕೊಟ್ಟವರ ಒತ್ತಾಯ ಹೆಚ್ಚಾದಾಗ ತಲೆಯ ಮೇಲೆ ಕೈ ಹೊತ್ತ ಮಗ ಅನಿವಾರ್ಯವಾಗಿ ಒಂದೆಕರೆ ಭೂಮಿಯನ್ನು ಮಾರಿ ಮಗ ಸ್ವಲ್ಪ ಸಾಲವನ್ನು ತೀರಿಸಿದ. ಉಳಿದ ಒಂದೆಕರೆ ಭೂಮಿಯಲ್ಲಿ ಒಕ್ಕಲುತನ ಮಾಡಿ ಮನೆಯ ನಿರ್ವಹಣೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಒಕ್ಕಲುತನವನ್ನು ಕೈ ಬಿಟ್ಟು ಹತ್ತಿರದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ದಿನಗೂಲಿ ಕಾರ್ಮಿಕನಾಗಿ ಸೇರಿಕೊಂಡ. ಈ ಮಧ್ಯ ಆತನಿಗೂ ಎರಡು ಮಕ್ಕಳಾದವು.

ಗಂಡನ ಅಕಾಲ ಮರಣ, ಹದಗೆಟ್ಟ ಮನೆಯ ಪರಿಸ್ಥಿತಿ
ಹೊಲ ಇದ್ದೂ ಕೂಲಿ ಕೆಲಸ ಮಾಡುವ ಮಗನ ಪರಿಸ್ಥಿತಿ ಕಂಡು ನನಗೂ ಕೂಡ ಮುಪ್ಪಿಗೆ ಮುನ್ನವೇ ವೃದ್ಧಾಪ್ಯ ಆವರಿಸಿತ್ತು. ಮತ್ತೊಂದೆರಡು ವರ್ಷಗಳು ಕಳೆದ ಮೇಲೆ ಮಗ ಕೆಲಸಕ್ಕೆ ಹೋಗುತ್ತಿದ್ದ ಫ್ಯಾಕ್ಟರಿ ಮುಚ್ಚಿ ಒಂದು ಹೊತ್ತಿನ ಊಟಕ್ಕೂ ತೊಂದರೆ ಎಂದಾದಾಗ ಮಗ ಉಳಿದ ಒಂದು ಎಕರೆ ಭೂಮಿಯನ್ನು ಮಾರುತ್ತೇನೆ... ಫೈನಾನ್ಸ್ ನವರ ಸಾಲ ತೀರಿದರೆ ಹೇಗಾದರೂ ಬದುಕು ಕಟ್ಟಿಕೊಳ್ಳಬಹುದು ಎಂದು ನನ್ನನ್ನು ಒಪ್ಪಿಸಿ ಗೊತ್ತಿರುವವರ ಮೂಲಕ ಹೊಲವನ್ನು ಬೇರೆಯವರಿಗೆ ಮಾರಿದ. ಹತ್ತಿರದ ಪೇಟೆಗೆ ಕೆಲಸಕ್ಕೆ ಎಂದು ಹೋದ ಆತ ಅಲ್ಲಿಯೇ ಪುಟ್ಟ ಒಂದು ಕೋಣೆಯ ಶೀಟಿನ ಬಾಡಿಗೆ ಮನೆಯನ್ನು ಹಿಡಿದು ನಮ್ಮೆಲ್ಲರನ್ನು ಅಲ್ಲಿಗೆ ಸ್ಥಳಾಂತರಿಸಿದ.
ಇದೀಗ ಮಗ ಫ್ಯಾಕ್ಟರಿ ಕೆಲಸಕ್ಕೆ ಹೋದರೆ, ಹೊಲಿಗೆಯನ್ನು ಕಲಿತಿರುವ ಸೊಸೆ ಗಾರ್ಮೆಂಟ್ಸ್ ಉದ್ಯೋಗಕ್ಕೆ ಹೋಗುತ್ತಾಳೆ. ಮಕ್ಕಳು ಪ್ರಾಥಮಿಕ ಶಾಲೆಯ ಕಟ್ಟೆ ಹತ್ತಿದ್ದಾರೆ... ಅವರವರು ಕೆಲಸಕ್ಕೆ ಹೋಗುವ ಮುನ್ನ ನಾನು ನನ್ನ ಕೈಲಾದಷ್ಟುಮನೆಯ ಕೆಲಸಗಳಲ್ಲಿ ಕೈಗೂಡುತ್ತೇನೆ. ಮಧ್ಯಾಹ್ನದ ಹೊತ್ತಿಗೆ ಮನೆ ಬಿಕೋ ಎಂದು ತೋರಿದಾಗ ಅಲ್ಲೇ ಇರುವ ಮರದ ಕಟ್ಟೆಯ ಬಳಿ ನನ್ನದೇ ವಾರಿಗೆಯ ಹೆಣ್ಣು ಮಕ್ಕಳೊಂದಿಗೆ ಕುಳಿತು ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತೇನೆ.

ಇದೀಗ ಮಗಳಿಗೆ ಅಂಗನವಾಡಿಯಲ್ಲಿ ಉದ್ಯೋಗ ದೊರೆತಿದ್ದು ಆಕೆಯ ಬದುಕು ಹಸನಾಗಿದೆ. ಆಗಾಗ ಬಂದು ಹೋಗುವ ಆಕೆ ನನ್ನ ಕೈ ಖರ್ಚಿಗೆ ತುಸು ಹಣವನ್ನು ಇಟ್ಟು ಹೋಗುತ್ತಾಳೆ. ಹಾಗೆಂದು ನನಗೇನು ಖರ್ಚುಗಳಿಲ್ಲ... ಆಗಾಗ ನನ್ನ ಮೊಮ್ಮಕ್ಕಳ ತಿಂಡಿ ತಿನಿಸಿಗೆ ಆ ಹಣವನ್ನು ನಾನು ಖರ್ಚು ಮಾಡುತ್ತೇನೆ.

ನನ್ನ ಸೊಸೆ ಕೂಡ ಒಳ್ಳೆಯವಳೇ.... ನಾನು ಇಬ್ಬರೂ ಮಕ್ಕಳಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸಿ ಶಾಲೆಗೆ ಹೋಗಲು ತಯಾರು ಮಾಡಿದರೆ ಸೊಸೆ ಅವರಿಗೆ ತಿಂಡಿ ಮತ್ತು ನಮಗೆಲ್ಲ ಊಟಕ್ಕೆ ಅಡುಗೆಯನ್ನು ತಯಾರಿಸುತ್ತಾಳೆ. ಸರ್ಕಾರಿ ಶಾಲೆಯಾದ್ದರಿಂದ ಮಧ್ಯಾಹ್ನದ ಬಿಸಿಯೂಟ, ಹಾಲು ತತ್ತಿ ಎಲ್ಲವೂ ಮಕ್ಕಳಿಗೆ ದೊರೆಯುತ್ತಿರುವುದು ತುಸು ನಿರಾಳ ಎನಿಸಿದರೂ ಮನೆಯಲ್ಲೂ ದುಡಿದು ಹೊರಗೆ ದುಡಿಯವ ಅನಿವಾರ್ಯತೆಗೆ ಒಳಗಾಗಿರುವ ಸೊಸೆಯನ್ನು ಕಂಡು ಮನಸ್ಸಿಗೆ ಖೇದವೆನಿಸುತ್ತದೆ.
ಒಂದೊಮ್ಮೆ ಆ ಫೈನಾನ್ಸ್ ನಲ್ಲಿ ಸಾಲವಾಗಿ ಹಣ ತೆಗೆದುಕೊಳ್ಳದೆ ಇದ್ದಲ್ಲಿ ನಮ್ಮ ಹೊಲ ನಮಗೆ ಉಳಿಯುತ್ತಿತ್ತು. ಸಾಲಕ್ಕೆ ಗಂಡ ಆಹಾರವಾಗುತ್ತಿರಲಿಲ್ಲ... ಮಗನ ಬದುಕು ಹಳಿ ತಪ್ಪುತ್ತಿರಲಿಲ್ಲ ನಮ್ಮ ಬದುಕು ಕೂಡ ನೇರ್ಪಾಗಿರುತ್ತಿತ್ತು ಎಂಬ ಭಾವ ಹಾದು ಹೋದಾಗ
ಭಾರವಾದ ನಿಟ್ಟುಸಿರು ಹೊರಬರುತ್ತದೆ ಅಷ್ಟೇ.



ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು