ಬೆಂಗಳೂರು: 2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಇಂಧನ ಕ್ಷೇತ್ರದ ಸ್ವಾವಲಂಬನೆಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಗೃಹ ಬಳಕೆದಾರರು, ರೈತರು ಹಾಗೂ ಹಸಿರು ಇಂಧನ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.
ರಾಜ್ಯದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ₹10,578 ಕೋಟಿ ಮೀಸಲಿರಿಸಲಾಗಿದೆ. ಜೊತೆಗೆ ರೈತರಿಗೆ ನೆರವಾಗುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಸಹಾಯಧನ ಯೋಜನೆಗೆ ₹19,290 ಕೋಟಿ ಅನುದಾನವನ್ನು ಒದಗಿಸಲಾಗಿದೆ.
ಇಂಧನ ಸ್ವಾವಲಂಬನೆ ಸಾಧಿಸಲು ಸರ್ಕಾರ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಎಂಬ ಹೊಸ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಅಂದಾಜು ₹10,500 ಕೋಟಿ ವೆಚ್ಚದಲ್ಲಿ 3,000 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಆರಂಭಿಸಲು ಯೋಜಿಸಲಾಗಿದೆ.
ಇನ್ನೂ ವಿದ್ಯುತ್ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಅಂದಾಜು ₹3,400 ಕೋಟಿ ವೆಚ್ಚದಲ್ಲಿ ಹುಲಿಯೂರು, ಪಾವಗಡ ಮತ್ತು ಕುಷ್ಟಗಿ ಸಬ್ ಸ್ಟೇಷನ್‌ಗಳಲ್ಲಿ 2,000 MWh ಸಾಮರ್ಥ್ಯದ ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ (BESS) ಅಳವಡಿಕೆ ಯೋಜನೆ ಪ್ರಾರಂಭಿಸಲಾಗುತ್ತದೆ.
ಇದೇ ವೇಳೆ ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಾರ್ವಜನಿಕ ಸ್ಥಳಗಳಲ್ಲಿ ₹777 ಕೋಟಿ ವೆಚ್ಚದಲ್ಲಿ 1,250 ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಪಿ.ಎಮ್–ಇ ಡ್ರೈವ್ ಯೋಜನೆ ಅಡಿಯಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಈ ಯೋಜನೆಗಳ ಮೂಲಕ ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆ, ರೈತರ ನೆರವು ಹಾಗೂ ವಿದ್ಯುತ್ ವಾಹನಗಳ ಬಳಕೆ ಹೆಚ್ಚುವ ನಿರೀಕ್ಷೆಯಿದೆ

