Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಅಸೀಮ ಸಾಹಸಿ ಮಹಿಳೆ.... ಮಾಲತಿ ಹೊಳ್ಳ

 

ಅದು 1960ರ ಸಮಯ. ತನ್ನ ಪಾಲಕರ ನಾಲ್ಕು ಜನ ಮಕ್ಕಳಲ್ಲಿ ಆಕೆಯೂ ಒಬ್ಬಳು. ಉಡುಪಿ ಭಟ್ಟರ ಕುಟುಂಬದಿಂದ ಬಂದ ಆಕೆ ಹುಟ್ಟುವ ಹೊತ್ತಿಗೆ ಆಕೆಯ ಪಾಲಕರು ಬೆಂಗಳೂರಿಗೆ ಬದುಕನ್ನು ಅರಸಿ ವಲಸೆ ಬಂದಿದ್ದರು. ಪುಟ್ಟದೊಂದು ಉಡುಪಿ ಆಹಾರವನ್ನು ತಯಾರಿಸುವ ಹೋಟೆಲನ್ನು ಆರಂಭಿಸಿದ್ದ. ಅವರಿಗೆ ಬದುಕಿನ ನಿರ್ವಹಣೆಯೇ ಕಷ್ಟಕರವಾಗಿತ್ತು. ಅಂತಹ ಸಮಯದಲ್ಲಿ ಇಡೀ ವಿಶ್ವದಾದ್ಯಂತ ವ್ಯಾಪಕ ಪಿಡುಗಾಗಿ ಪರಿಣಮಿಸಿದ ಪೋಲಿಯೋ ರೋಗಕ್ಕೆ ಆ ಪುಟ್ಟ ಒಂದುವರೆ ವರ್ಷದ ಮಗು ಈಡಾಗಿತ್ತು. ಕುತ್ತಿಗೆಯ ಕೆಳಭಾಗ ಸಂಪೂರ್ಣವಾಗಿ ಚಲನೆ ಇಲ್ಲದ ರೀತಿಯಲ್ಲಿ ಇದ್ದ ಮಗುವನ್ನು ನೋಡಿ ತಂದೆ ತಾಯಿ ನೋವಿನಿಂದ ಒದ್ದಾಡುವುದನ್ನು ಬಿಟ್ಟರೆ ಮತ್ತೇನು ಮಾಡಲು ಸಾಧ್ಯವಿರಲಿಲ್ಲ. ಕುಟುಂಬದವರ ಕರುಣೆಯ ಕೂಸಾಗಿದ್ದ ಆಕೆಯನ್ನು ಹೇಗಾದರೂ ಮಾಡಿ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಬೇಕು ಎಂಬ ಅದಮ್ಯ ಆಶಯ ಆಕೆಯ ತಾಯಿಯದಾಗಿತ್ತು. ಪರಿಚಯದವರ ಹೇಳಿಕೆಯ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕ್ ಶಾಕ್ / ವಿದ್ಯುತ್ ಕಂಪನ ಚಿಕಿತ್ಸೆಯನ್ನು ನೀಡಿದರೆ ಶಕ್ತಿಗುಂದಿದ ನರಗಳಲ್ಲಿ ಚೈತನ್ಯವನ್ನು ತುಂಬಲು ಸಾಧ್ಯವಾಗಬಹುದು ಎಂಬ ಕಾರಣಕ್ಕೆ ಆಕೆಯ ತಾಯಿ ಪ್ರತಿದಿನ ತನ್ನ ಮನೆ ಕೆಲಸಗಳೆಲ್ಲವನ್ನು ಪೂರೈಸಿ ಮಗುವನ್ನು ಹೊತ್ತು ನಡೆದುಕೊಂಡು ಹೋಗಲು ತುಸು ದೂರವೇ ಎನ್ನಿಸಬಹುದಾದಷ್ಟು ದಾರಿಯನ್ನು ಪುಟ್ಟ ಮಗುವನ್ನು ಕಂಕುಳಲ್ಲಿ ಹೊತ್ತು ಸಾಗುತ್ತಿದ್ದಳು. ದಿನಕ್ಕೆ ಮೂರು ಬಾರಿ ಆ ವಿದ್ಯುತ್ ಕಂಪನ ಚಿಕಿತ್ಸೆಗೆ ಒಳಗಾಗಬೇಕಿತ್ತು.... ಮಗುವಿನ ನರಗಳಲ್ಲಿ ಶಕ್ತಿ ಇಲ್ಲದ ಕಾರಣ ಆಕೆಗೆ ಆ ನೋವಿನ ಅರಿವು ಆಗದೆ ಹೋದರೂ ತಾಯಿಯ ಜೀವ ಚಿಕಿತ್ಸೆಯ ಕಾರಣದಿಂದ ತನ್ನ ಮಗು ಪಡಬಹುದಾದ ಹಿಂಸೆಯನ್ನು ಖುದ್ದು ತಾನೇ ಅನುಭವಿಸುವಂತೆ ಒದ್ದಾಡುತ್ತಿದ್ದಳು.
ಮುಂಜಾನೆ, ಮಧ್ಯಾಹ್ನ ಹಾಗೂ ಸಾಯಂಕಾಲದ ಎಲೆಕ್ಟ್ರಿಕ್ ಶಾಕ್ ಚಿಕಿತ್ಸೆಯ ನಂತರ ಮತ್ತೆ ಮಗುವನ್ನು ಹೊತ್ತುಕೊಂಡು ಇಳಿಸಂಜೆಗೆ ಮನೆ ಸೇರುತ್ತಿದ್ದರು ಆಕೆಯ ತಾಯಿ. ಸರಿ ಸುಮಾರು ಎರಡು ವರ್ಷಗಳ ಕಾಲ ದಣಿವರಿಯದೆ ತನ್ನ ಮಗಳಿಗಾಗಿ ತನ್ನ ಬದುಕನ್ನೇ ಆಕೆ ಮುಡುಪಾಗಿಟ್ಟಳು.
ಪರಿಣಾಮವಾಗಿ ಕುತ್ತಿಗೆಯ ಕೆಳಗೆ ಸಂಪೂರ್ಣ ನಿಷ್ಕ್ರಿಯವಾಗಿದ್ದ ಆಕೆಯ ದೇಹದಲ್ಲಿ ತುಸು ಚೈತನ್ಯ ಒಡಮೂಡಿತು. ತರಕಾರಿಯ ಮುದ್ದೆಯಂತೆ ಬಿದ್ದಲ್ಲೇ ಬಿದ್ದಿರುತ್ತಿದ್ದ ಆಕೆ ಇದೀಗ ಕೊಂಚ ಮಟ್ಟಿಗೆ ತನ್ನ ಕಾಲ ಬಲದ ಮೇಲೆ ನಿಧಾನವಾಗಿ ಎದ್ದು ನಿಲ್ಲುವಂತೆ ಆಯಿತು. ಆದರೆ ಇಷ್ಟಕ್ಕೆ ಮುಗಿಯಲಿಲ್ಲ.
ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ, ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ದೈಹಿಕ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಮದರಾಸಿನ ಒಂದು ಅತ್ಯಂತ ಕಡಿಮೆ ಶುಲ್ಕವನ್ನು ವಿಧಿಸುವ ಸ್ಥಾನಿಕ ವಸತಿಯುತ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸಲಹೆ
ಆಕೆಯ ಪಾಲಕರಿಗೆ ನೀಡಿದರು.
ನಾಲ್ಕು ವರ್ಷ ಕೂಡ ತುಂಬದ ಪುಟ್ಟ ಮಗುವನ್ನು ಕಾಣದ ದೂರದ ಊರಿನಲ್ಲಿ ಅದು ಹೇಗೆ ಬಿಟ್ಟು ಬರಬೇಕು ಎಂಬುದು ತಾಯಿಯ ಕಳವಳವಾದರೆ ತನ್ನ ಮಗಳು ಯಾರಿಗೂ ಭಾರವಾಗಬಾರದು ತನ್ನ ಬದುಕನ್ನು ತಾನು ಸಂಭಾಳಿಸಿಕೊಳ್ಳುವಷ್ಟಾದರೂ ಆಕೆ ದೈಹಿಕ ಆರೋಗ್ಯವನ್ನು ಹೊಂದಬೇಕು ಎಂಬುದು ತಂದೆಯ ಆಶಯವಾಗಿತ್ತು. ಅಂತಿಮವಾಗಿ ಮಗಳ ಭವಿಷ್ಯದ ದೃಷ್ಟಿಯಿಂದ ಪಾಲಕರಿಬ್ಬರೂ ಒಪ್ಪಿ ಆಕೆಯನ್ನು ದೂರದ ಮದರಾಸು ನಗರದ ವಸತಿ ಶಾಲೆಗೆ ದಾಖಲಿಸಿದರು. ವಾರವಿಡೀ ತಮ್ಮ ಉಡುಪಿ ಹೋಟೆಲಿನ ಕೆಲಸದ ಒತ್ತಡದಿಂದ ದಣಿಯುತ್ತಿದ್ದ ತಂದೆ ರವಿವಾರ ಮುಂಜಾನೆಯ ರೈಲಿಗೆ ಹೋಗಿ ಮಗಳನ್ನು ಮಾತಾಡಿಸಿಕೊಂಡು ಮತ್ತೆ ಸಂಜೆಯ ರೈಲಿನಲ್ಲಿ ಮರಳುತ್ತಿದ್ದರು... ಗಂಡ ಹೆಂಡತಿ ಉಳಿದ ಮೂರು ಜನ ಮಕ್ಕಳ ಬದುಕಿನ ಬಂಡಿಯನ್ನು ಸಾಗಿಸಲು ಮರುದಿನ ಮುಂಜಾನೆ ಹೋಟೆಲ್ ಬಾಗಿಲು ತೆಗೆಯಲೇಬೇಕಾದ ಅನಿವಾರ್ಯತೆ ಅವರಿಗಿತ್ತು.
ತನ್ನ ಮೂರನೇ ವಯಸ್ಸಿನಿಂದ 18ನೇ ವಯಸ್ಸಿನವರೆಗೆ ಸರಿಸುಮಾರು 15 ವರ್ಷಗಳ ಕಾಲ ಅಂಗವಿಕಲರಿಗಾಗಿಯೇ ಇದ್ದ ಆ ಶಾಲೆಯಲ್ಲಿ ಸರಿ ಸುಮಾರು 34 ಶಸ್ತ್ರ ಚಿಕಿತ್ಸೆಗಳಿಗೆ ಆಕೆ ಒಳಗಾದಳು.... ಪರಿಣಾಮವಾಗಿ ಕೈಯಲ್ಲಿ ಊರುಗೋಲುಗಳನ್ನು ಹಿಡಿದು ನಡೆಯುವಷ್ಟರ ಮಟ್ಟಿಗೆ ಆಕೆ ತಯಾರಾದಳು. ಇದೆಲ್ಲದರ ಮಧ್ಯದಲ್ಲಿ ಆಕೆಗೆ ನೆಮ್ಮದಿ ತರುತ್ತಿದ್ದದ್ದು ಆಕೆಯ ಪಠ್ಯ ಚಟುವಟಿಕೆ. ಅಲ್ಲಿ ಲಭ್ಯವಿದ್ದ ತೆಲುಗು / ತಮಿಳು ಮಾಧ್ಯಮಗಳಲ್ಲಿ ಆಕೆ ತೆಲುಗು ಭಾಷೆಯನ್ನು ಆಯ್ದುಕೊಳ್ಳಲು ಕಾರಣ ಅದು ಕನ್ನಡದ ಲಿಪಿಗಳಿಗೆ ತುಂಬಾ ಹತ್ತಿರವಾಗುತ್ತದೆ ಎಂದು. ಅತ್ಯುತ್ತಮ ಅಂಕಗಳೊಂದಿಗೆ ಹತ್ತನೇ ತರಗತಿಯನ್ನು ಪಾಸಾದ ಆಕೆ ಮುಂದೆ ತನ್ನ ಪಾಲಕರ ಬಳಿ ಬಂದಳು.
ಇದುವರೆಗೂ ತನ್ನಂತೆಯೇ ಇದ್ದ ಅಂಗವಿಕಲರ ಪ್ರಪಂಚದಲ್ಲಿ ಬದುಕಿದ್ದ ಆಕೆಗೆ ಇದೀಗ ನೀರಿನಿಂದ ಹೊರ ಬಿದ್ದ ಮೀನಿನಂತಹ ಅನುಭವ.
ಕಾಲೇಜು ಶಿಕ್ಷಣವನ್ನು ಮಗಳು ಪೂರೈಸಲಿ ಎಂದು ಮನೆಗೆ ಹತ್ತಿರವಿದ್ದ ಕಾಲೇಜಿಗೆ ಮಗಳನ್ನು ದಾಖಲಿಸಿದರು. ಆದರೆ ಮೂರು ಅಂತಸ್ತಿನ ಕಟ್ಟಡದಲ್ಲಿ ಆಕೆಯ ತರಗತಿಗಳು ಇದ್ದದ್ದು ಮೂರನೇ ಅಂತಸ್ತಿನಲ್ಲಿ ತನ್ನ ಊರಿಗೋಲುಗಳ ಸಹಾಯದಿಂದ ಹೆಗಲಿಗೆ ಒಂದು ಪುಟ್ಟ ಬ್ಯಾಗನ್ನು ನೇತು ಹಾಕಿಕೊಂಡು ಆಕೆ ತರಗತಿಯನ್ನು ತಲುಪುವ ವೇಳೆಗೆ ಆ ಅವಧಿಯ ಪಾಠ ಮುಗಿದು ಹೋಗಿರುತ್ತಿತ್ತು ಕೆಲವೇ ದಿನಗಳಲ್ಲಿ ಇದರಿಂದ ಬೇಸತ್ತು ಹೋದ ಆಕೆ ಪ್ರಾಂಶುಪಾಲರನ್ನು ಭೇಟಿಯಾಗಿ ಅತ್ಯಂತ ಗಟ್ಟಿಯಾದ ಧ್ವನಿಯಲ್ಲಿ ತನಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡು ಪರಿಹಾರವನ್ನು ಪಡೆದಳು.... ಹೇಳದೆ ಹೋದರೆ ಯಾವ ಸಮಸ್ಯೆಗೂ ಪರಿಹಾರ ದೊರೆಯುವುದಿಲ್ಲ. ನಿಮ್ಮಅಳಲನ್ನು ಕೇಳಲು , ಯಾರೂ ತಯಾರಿರುವುದಿಲ್ಲ ನಿಜ ಆದರೆ ಹೇಳಲು ನೀವು ಖಂಡಿತವಾಗಿಯೂ ತಯಾರಿರಬೇಕು ಎಂಬುದನ್ನು ಆಕೆ ತಾನು ಚಿಕ್ಕಂದಿನಿಂದ ಇದ್ದ ವಸತಿ ಶಾಲೆಯಲ್ಲಿ ಕಲಿತಿದ್ದಳು.
ಮುಂದೆ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ ಮಾಲತಿ ಹೊಳ್ಳ ಮ್ಯಾನೇಜರ್ ಆಗಿ ಕೆಲ ವರ್ಷಗಳ ಕಾಲ ತಮ್ಮ ಹುದ್ದೆಯಲ್ಲಿ ಮುಂದುವರೆದು ನಂತರ ಸ್ವಯಂ ನಿವೃತ್ತಿಯನ್ನು ಪಡೆದರು.
ಅದೊಂದು ಬಾರಿ ಆಕೆ ಅಂಗವಿಕಲರಿಗೆ ಇರುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರು ಮತ್ತೆ ಹಿಂತಿರುಗಿ ನೋಡಲಿಲ್ಲ. 397 ಚಿನ್ನದ ಪದಕಗಳು, ಜಾ ಬೆಳ್ಳಿ ಹಾಗೂ 5 ಕಂಚಿನ ಸರಕುಗಳನ್ನು ಪಡೆದಿರುವ ಮಾಲತಿ ಅವರು ಭಾರತ ದೇಶದಲ್ಲಿ ಕ್ರೀಡೆಗಾಗಿ ನೀಡಲಾಗುವ ಅರ್ಜುನ ಹಾಗೂ ದೇಶದ ಪರಮೋಚ್ಚ ಗೌರವ ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ದಕ್ಷಿಣ ಕೊರಿಯಾ ಅಥೆನ್ಸ್ ಬಾರ್ಸಿಲೋನಾ ಮತ್ತು ಬೀಜಿಂಗ್ ಗಳಲ್ಲಿ ನಡೆದ ಪ್ಯಾರಾ ಒಲಂಪಿಕ್ ನಲ್ಲಿ ಭಾಗವಹಿಸಿರುವ ಆಕೆ ಬೀಜಿಂಗ್, ಕೌಲಾಲಂಪುರ್, ಸೌತ್ ಕೊರಿಯಾ ಮತ್ತು ಬ್ಯಾಂಕಾಕ್ ದೇಶಗಳಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕೂಡ ಭಾಗವಹಿಸಿದ್ದಾರೆ.
ಡೆನ್ಮಾರ್ಕ್ ಮತ್ತು ಆಸ್ಟ್ರೇಲಿಯಾಗಳಲ್ಲಿ ನಡೆದ
ವರ್ಲ್ಡ್ ಮಾಸ್ಟರ್ ನಲ್ಲಿ ಭಾಗವಹಿಸಿದ ಆಕೆ ಆಸ್ಟ್ರೇಲಿಯಾದ ಕಾಮನ್ ವೆಲ್ತ್ ಗೇಮ್ ಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಬೆಲ್ಜಿಯಂ, ಕೌಲಾಲಂಪುರ ಮತ್ತು
ಇಂಗ್ಲೆಂಡ್ನಲ್ಲಿ ನಡೆದ ಮುಖ್ಯ ಚಾಂಪಿಯನ್ ಶಿಪ್ಗಳಲ್ಲಿ ಕೂಡ ಅವರು ಭಾಗವಹಿಸಿದ್ದಾರೆ.
ಇಲ್ಲಿಯವರೆಗೂ ಸರಿಸುಮಾರು 34 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿರುವ ಮಾಲತಿ ಅವರು ಈ ಸಾಧನೆ ಮಾಡಿರುವುದು ಅವರ ಸ್ಪರ್ಧಾ ಮನೋಭಾವವನ್ನು ತೋರುತ್ತದೆ. ತಮ್ಮ ಉಳಿದ ಸ್ನೇಹಿತರೊಂದಿಗೆ 2006 ರಿಂದ ಹೆಚ್ಎಎಲ್ ನ ವಸತಿಯಲ್ಲಿ ಮಾತೃ ಫೌಂಡೇಶನ್ ಎಂಬ ಅಂಗವಿಕಲರಿಗಾಗಿ ವಿಶೇಷ ಸಂಸ್ಥೆಯೊಂದನ್ನು ತೆರೆದಿರುವ ಅವರು ಇದೀಗ ಸರ್ಜಾಪುರದ ಬಳಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಅವಕಾಶ ವಂಚಿತ ಅಂಗವಿಕಲರಿಗೆ ಆಶ್ರಯ ನೀಡಿದ್ದು ಅವರ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಮಯ ಮತ್ತು ಶ್ರದ್ದೆ ಯನ್ನು ಮೀಸಲಿಡುವ ಕಾರಣ ತಮ್ಮ ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿರುವ ಮಾಲತಿ ಹೊಳ್ಳ ಅವರದು ಅತ್ಯದ್ಭುತ ಮಾತೃ ಹೃದಯ. ಕರ್ನಾಟಕ ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿನ ಅಂಗವಿಕಲ ಮಕ್ಕಳನ್ನು ತಾವೇ ಖುದ್ದಾಗಿ ಭೇಟಿಯಾಗಿ ಅವರಿಗೆ ಮಾತೃ ಸಂಸ್ಥೆಯಲ್ಲಿ ಆಶ್ರಯ ನೀಡಿ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಹಸ್ತ ಚಾಚಿದ್ದಾರೆ.
2009 ಜುಲೈ 8ರಂದು 'ಎ ಡಿಫರಂಟ್ ಸ್ಪ್ರಿರಿಟ್ ' ಎಂಬ ಆತ್ಮಕಥೆಯನ್ನು ಬರೆದು ಪ್ರಕಟಿಸಿರುವ ಅವರು ಕೇವಲ ತನ್ನ ಕಾಲುಗಳನ್ನು ಕಸಿದುಕೊಂಡಿರುವ ದೇವರು ತನಗೆ ಅದ್ಭುತವಾದ ಆತ್ಮ ಬಲವನ್ನು ಮತ್ತು ತುಸು ಹೆಚ್ಚೇ ಅದೃಷ್ಟವನ್ನು ನೀಡಿದ್ದು ಇಲ್ಲಿಯವರೆಗೂ ತಾನು ಸಾಧಿಸಲು ಸಾಧ್ಯವಾಗಿದ್ದು ಈ ಅಂಗವಿಕಲತೆಯಿಂದಲೇ ಎಂದು ಅತ್ಯಂತ ಹೆಮ್ಮೆಯಿಂದ ಹೇಳುವ ಮಾಲತಿ ಹೊಳ್ಳ ಅವರ
ಸಾಧನೆಗೆ ಒಂದು ದೊಡ್ಡ ಸೆಲ್ಯೂಟ್

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ